ವಿಜಯಪುರ: ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸಂತ್ರಸ್ತರಿಗೆ ನೋವಾಗಿದೆ. ಕಷ್ಟದಲ್ಲಿ ಇದ್ದಾರೆ. ರಾಜ್ಯದ 25 ಜನ ಸಂಸದರು ಪ್ರಧಾನಿ ಮೋದಿಯವರಿಗೆ ಒತ್ತಡ ಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಸಂಸದರ ವಿರುದ್ಧ ಸಿಡಿಮಿಡಿಗೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಸ್ತೆ ಹಾಗೂ ಪೇವಿಂಗ್ ಅಳವಡಿಕೆಗೆ ಶಂಕುಸ್ಥಾಪನೆಗೆ ಪೂಜೆ ನೆರವೇರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಇದು ಪ್ರಜಾತಂತ್ರ ದೇಶ. ಯಾರಿಗೂ ಅಂಜಿ ಜೀವನ ಮಾಡುವುದಿಲ್ಲ. ಅಂತಿಮವಾಗಿ ತಿರ್ಮಾನ ಮಾಡುವವರು ಜನರು ಎಂದಿದ್ದಾರೆ.
ಆಲಮಟ್ಟಿ ವಿಚಾರವಾಗಿ ನಾನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಷ್ಟೇ ಖಡಕ್ಕಾಗಿ ಮಾತಾಡಿದ್ದೆ. ಆಗ ನನಗೂ ಹೇಳಿದ್ರು. ನಿನ್ನ ಭವಿಷ್ಯ ಮುಗಿಯಿತು ಅಂತಾ. ಆದರೆ ನಾನು ಕೇಂದ್ರದ ಮಂತ್ರಿಯಾದೆ. ಬರಿ ಮಂತ್ರಿಯಾಗುವುದರ ಸಲುವಾಗಿ, ಮುಂದಿನ ಟಿಕೆಟ್‌ಗೊಸ್ಕರ ಜನರ ಹಿತ ಕಾಪಾಡದೇ ಇರುವುದು ತಪ್ಪು ಎಂದು ಕಳವಳ ವ್ಯಕ್ತಪಡಿಸಿದರು.
ಚಕ್ರವರ್ತಿ ಸೂಲೆಬೆಲೆಯವರು ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಅಂತಾ ಹಗಲು ರಾತ್ರಿ ತಪಸ್ಸು ಮಾಡಿದ್ದಾರೆ. ಸಂತ್ರಸ್ತರ ಪರಿಹಾರದ ಬಗ್ಗೆ ಕೇಳೋದು ತಪ್ಪಲ್ಲ. ಅವರು ಯಾವುದೇ ಪಾರ್ಟಿಯ ಪರವಾಗಿಲ್ಲ. ಬದಲಾಗಿ ಚಕ್ರವರ್ತಿ ಒಬ್ಬ ಸಾಮಾಜಿಕ ಕಾರ್ಯಕರ್ತ ಎಂದರು.