ವಿಜಯಪುರ:ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಶ್ರಮಕ್ಕೆ ಇಂದು ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಎಂ.ಬಿ.ಪಾಟೀಲ, ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ನಿಜಗುಣಾನಂದ ಸ್ವಾಮೀಜಿ, ಸಿಂದನೂರಿನ ಮಾಜಿ ಶಾಸಕ ಹಂಪನ ಗೌಡ ಮತ್ತು ಬಾದರ್ಲಿ ಶ್ರೀಗಳು ದರ್ಶನಕ್ಕೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.
ವೈದ್ಯರ ಹೇಳಿಕೆ: 'ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಯಾರಿಗೂ ಆತಂಕ ಬೇಡ. ಗಂಜಿ, ಜ್ಯೂಸ್‌ನಂತಹ ಆಹಾರವನ್ನು ಅವರಿಗೆ ನೀಡಲಾಗುತ್ತಿದೆ. ಅವರ ಪಲ್ಸ್ ರೇಟ್, ಬಿಪಿ ಚೆನ್ನಾಗಿದೆ' ಎಂದು ಡಾ.ವಿಜಯ್ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದರು.
ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಆತಂಕಗೊಂಡಿರುವ ಸಾವಿರಾರು ಭಕ್ತರು, ಅಭಿಮಾನಿಗಳು ಜ್ಞಾನಯೋಗಾಶ್ರಮದತ್ತ ಧಾವಿಸುತ್ತಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಆಶ್ರಮದ ಆವರಣದಲ್ಲಿಯೇ ತಂಗಿದ್ದಾರೆ. ಅನ್ಯರಾಜ್ಯದಿಂದಲೂ ಜನರು ಬರುತ್ತಿದ್ದಾರೆ. ಆಶ್ರಮದ ಆಡಳಿತ ಮಂಡಳಿ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಅನೇಕ ಭಕ್ತಾದಿಗಳು ಶ್ರೀಗಳು ಬೇಗ ಗುಣಮುಖರಾಗಲೆಂದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಆಶ್ರಮದ ಸುತ್ತ ಪೊಲೀಸ್ ಭದ್ರತೆ: ಆಶ್ರಮದ ಸುತ್ತಮುತ್ತ ಪೊಲೀಸ್ ಇಲಾಖೆ ವಿಶೇಷ ಭದ್ರತೆ ಕೈಗೊಂಡಿದೆ. ಗದಗ, ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡಿಎಸ್ಪಿ-5, ಸಿಪಿಐ-20, ಪಿಎಸ್ಐ-50, ಎಎಸ್ಐ -100, ಸಿಎಚ್ಸಿ-ಸಿಪಿಸಿ 1,000 ಸಿಬ್ಬಂದಿ ಇದ್ದಾರೆ.