ಕರ್ನಾಟಕ

karnataka

By

Published : Sep 23, 2020, 4:29 PM IST

ETV Bharat / state

ಪ್ರತಿವರ್ಷ ಪ್ರವಾಹದಲ್ಲಿ ಮುಳುಗುತ್ತಿದೆ ತಾರಾಪುರ:  ಮರೀಚಿಕೆಯಾದ ಸ್ಥಳಾಂತರ!

ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಕಳೆದ 16 ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಈ ಗ್ರಾಮದ ಶಾಶ್ವತ ಸ್ಥಳಾಂತರಕ್ಕೆ ಯಾವುದೇ ಜನಪ್ರತಿನಿಧಿಗಳು ಮುಂದೆ ಬಂದಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Sindagi Taluk Tarapur Village Flood problem
ಪ್ರತಿವರ್ಷ ಪ್ರವಾಹದಲ್ಲಿ ಮುಳುಗುತ್ತಿದೆ ತಾರಾಪುರ..ಮರೀಚಿಕೆಯಾಯ್ತು ಗ್ರಾಮದ ಸ್ಥಳಾಂತರ!

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಕಳೆದ 16 ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಆದರೂ ಈ ಗ್ರಾಮದ ಶಾಶ್ವತ ಸ್ಥಳಾಂತರಕ್ಕೆ ಯಾವುದೇ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಮುಂದೆ ಬಂದಿಲ್ಲ. ಹೀಗಾಗಿ ಪ್ರತಿವರ್ಷ ಪ್ರವಾಹ ಉಂಟಾದಾಗ ಗ್ರಾಮಸ್ಥರಿಗೆ ಅತಂತ್ರ ಸ್ಥಿತಿ ತಪ್ಪಿದ್ದಲ್ಲ.

ಪ್ರತಿವರ್ಷ ಪ್ರವಾಹದಲ್ಲಿ ಮುಳುಗುತ್ತಿದೆ ತಾರಾಪುರ..ಮರೀಚಿಕೆಯಾಯ್ತು ಗ್ರಾಮದ ಸ್ಥಳಾಂತರ!

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದರೆ ಉಜನಿ ಹಾಗೂ ವೀರ ಜಲಾಶಯಗಳು ಸಂಪೂರ್ಣ ಭರ್ತಿಯಾಗುತ್ತವೆ. ಇವುಗಳ ಹೆಚ್ಚುವರಿ ನೀರನ್ನು ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸೊನ್ನ ಬ್ಯಾರೇಜ್​ಗೆ ನೀರು ಬಿಟ್ಟರೆ,‌ ಭೀಮಾ ನದಿ ಪಾತ್ರದಲ್ಲಿನ ತಾರಾಪುರ ಸಂಪೂರ್ಣ ಜಲಾವೃತವಾಗುತ್ತದೆ. ಜನರು ಬೋಟ್​ಗಳ ಮುಖಾಂತರ ತಮ್ಮ ನಿತ್ಯದ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ರಾತ್ರಿಯಾದರೆ ಹುಳ, ಹಾವು, ಚೇಳುಗಳ ಕಾಟ ಆರಂಭವಾಗುತ್ತಿದ್ದು, 16 ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.

ತಾರಾಪುರ ಗ್ರಾಮ ಸ್ಥಳಾಂತರಕ್ಕೆ ಪ್ರತ್ಯೇಕ ಜಾಗ ಗುರುತಿಸಿ ಅಲ್ಲಿಯೇ ವಾಸಿಸುವಂತೆ ಸರ್ಕಾರ ಹಲವರಿಗೆ ಹಕ್ಕುಪತ್ರ ನೀಡಿದೆ. ಆದರೆ, ಒಂದು ಕುಟುಂಬ ವಾಸಿಸುವಷ್ಟು ಸ್ಥಳ ನೀಡಿ ಎಂಬ ಗ್ರಾಮಸ್ಥರ ಬೇಡಿಕೆಯಿಂದ ಸ್ಥಳಾಂತರವಾಗಿಲ್ಲ. 2004 ರಿಂದ ತಾರಾಪುರ ಗ್ರಾಮಕ್ಕೆ ಮುಳುಗಡೆ ಗ್ರಾಮ ಎಂಬ ಹಣೆಪಟ್ಟಿ ಅಂಟಿಸಲಾಗಿದ್ದು, ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ತಾರಾಪುರದಲ್ಲಿ ಒಟ್ಟು 100-120 ಮನೆಗಳಿದ್ದು, 800ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಪ್ರವಾಹದಿಂದಾಗಿ ಇಲ್ಲಿನ ಜನರು ಪ್ರತಿವರ್ಷ ಬೆಳೆ ಕಳೆದುಕೊಂಡು ಸಾಕಷ್ಟು ನಷ್ಟ ಅನುಭವಿಸುತ್ತಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ತಾರಾಪುರ ಗ್ರಾಮವನ್ನು ನಾಗರಿಕರ ಬೇಡಿಕೆಗೆ ಅನುಗುಣವಾಗಿ ಸ್ಥಳಾಂತರಿಸುವ ಕೆಲಸ ಮಾಡಬೇಕಾಗಿದೆ.

ABOUT THE AUTHOR

...view details