ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಮಠದಲ್ಲೇ ಕುರಾನ್ ಪಠಿಸಿ ಕುಂಟೋಜಿ ಶ್ರೀಗಳಿಗೆ ಮುಸ್ಲಿಂ ಸಮಾಜದಿಂದ ಗೌರವ

ಹಿರೇಮಠದಲ್ಲಿಯೇ ಕುರಾನ್ ಪಠಣ ಮಾಡುವ ಮೂಲಕ ಮುದ್ದೇಬಿಹಾಳ ತಾಲೂಕಿನ ಮುಸ್ಲಿಂ ಸಮಾಜದವರು ಪೀಠಾಧಿಪತಿ ಚನ್ನವೀರ ದೇವರು ಅವರನ್ನು ವಿಭಿನ್ನವಾಗಿ ಸನ್ಮಾನಿಸಿದರು.

recitation-of-the-quran-in-kuntoji-hiremath
ಭಾವೈಕ್ಯತೆ ಸಾರಿದ ಕುಂಟೋಜಿ ಶ್ರೀಗಳು

By

Published : Nov 7, 2021, 8:59 PM IST

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿಯ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಚನ್ನವೀರ ದೇವರು ಅವರಿಗೆ ತಮಿಳುನಾಡಿನ ಇಂಡಿಯನ್ ಎಂಪೈರ್ ವರ್ಚುವಲ್ ವಿಶ್ವವಿದ್ಯಾಲಯವು ಈಚೆಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಡಾಕ್ಟರೇಟ್ ಪದವಿ ಪಡೆದ ಶ್ರೀಗಳಿಗೆ ಹಲವಾರು ಸಂಘ ಸಂಸ್ಥೆಗಳು ಅಭಿನಂದಿಸುತ್ತಿವೆ.

ಇದೀಗ ತಾಲೂಕಿನ ಮುಸ್ಲಿಂ ಸಮಾಜದವರು ಶ್ರೀಗಳಿಗೆ ಹಿರೇಮಠದಲ್ಲಿಯೇ ಕುರಾನ್ ಪಠಿಸಿ ಡಾ.ಚನ್ನವೀರ ದೇವರನ್ನು ಸನ್ಮಾನಿಸಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಹಾಫೀಜ್ ಅಲ್ಲಾಭಕ್ಷ ಖಾಜಿ, 'ಸ್ವಾಮೀಜಿಯವರಿಗೆ ಡಾಕ್ಟರೇಟ್ ಪದವಿ ಬಂದಿರುವುದಕ್ಕೆ ನಮಗೆ ಹರ್ಷವಾಗಿದೆ. ಎಲ್ಲ ಧರ್ಮೀಯರನ್ನು ಪ್ರೀತಿಯಿಂದ ಕಾಣುವ ಅವರ ಗುಣ ಹಾಗೂ ಸಾಮಾಜಿಕ ಸೇವೆಗೆ ಈ ಪದವಿ ಬಂದಿದೆ. ನಾವು ಕುರಾನ್ ಗ್ರಂಥ ಕೊಟ್ಟು ಅವರಿಗೆ ಅಭಿನಂದಿಸಿದ್ದೇವೆ' ಎಂದು ತಿಳಿಸಿದರು.

ಕುಂಟೋಜಿ ಶ್ರೀಗಳನ್ನು ಸನ್ಮಾನಿಸಿದ ಮುಸ್ಲಿಂ ಸಮುದಾಯದವರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಚೆನ್ನವೀರ ದೇವರು, 'ಭಕ್ತರ ಖುಷಿಯಲ್ಲಿ ನಾವು ಸಂತೋಷ ಕಾಣುತ್ತೇವೆ. ಸಾಮಾಜಿಕ ಸೇವೆಗೆ ಯಾವುದೇ ಜಾತಿ, ಮತ, ಬೇಧ ಇಲ್ಲ. ಹಿಂದೂ-ಮುಸ್ಲಿಂ ಬಾಂಧವರು ಸಹೋದರರಂತೆ ಇದ್ದೇವೆ' ಎಂದು ಹೇಳಿದರು.

ಸ್ವಾಮೀಜಿ ಇತ್ತೀಚೆಗೆ ತಮ್ಮ ನೇತೃತ್ವದ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಅಡಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಕೊಡೆ ಮತ್ತು ನೆರವು ತಲುಪಿಸಿದ್ದರು. ಅವರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲೆಡೆ ಪ್ರಚಾರಗೊಂಡಿತ್ತು.

ABOUT THE AUTHOR

...view details