ಕರ್ನಾಟಕ

karnataka

ETV Bharat / state

ಭೀಮಾತೀರದ ಹಂತಕರೆನ್ನುವ ಕಳಂಕ ತೊಡೆದು ಹಾಕಿ: ಎಡಿಜಿಪಿ ಅಲೋಕ್​ಕುಮಾರ್​ಗೆ ಮನವಿ

ಚಡಚಣ ಭಾಗವನ್ನು ಭೀಮಾತೀರದ ಹಂತಕರು ಎಂದು ಕರೆಯುತ್ತಾರೆ. ಇದರಿಂದ ನಮ್ಮ ತಾಲೂಕಿನ ಯಾರೂ ಕೂಡಾ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ತಾಲೂಕಿಗೆ ಅಂಟಿರುವ ಈ ಕಳಂಕವನ್ನು ತೊಡೆದುಹಾಕಿ ಎಂದು ಸಾರ್ವಜನಿಕರು ಎಡಿಜಿಪಿ ಅಲೋಕ್​ಕುಮಾರ್​ಗೆ ಮನವಿ ಮಾಡಿದರು.

ADGP Alok Kumar
ಎಡಿಜಿಪಿ ಅಲೋಕ್​ಕುಮಾರ್

By

Published : Jul 20, 2022, 7:17 AM IST

Updated : Jul 20, 2022, 12:15 PM IST

ವಿಜಯಪುರ: ಭೀಮಾತೀರದ ಕಾನೂನು ಸುವ್ಯವಸ್ಥೆಗೆ ಎಡಿಜಿಪಿ ಅಲೋಕ್​ ಕುಮಾರ್​ ಶಾಂತಿಮಂತ್ರ ಪಠಿಸಿದರು. ಮಹಾದೇವ ಸಾಹುಕಾರ ಬೈರಗೊಂಡ ಹಾಗೂ ಮಲ್ಲಿಕಾರ್ಜನ ಚಡಚಣ ಕುಟುಂಬದ ಮಧ್ಯೆ ಹಲವು ದಶಕಗಳಿಂದ ನಡೆಯುತ್ತಿರುವ ದ್ವೇಷದ ಬೆಂಕಿ ಆರಿಸಲು ಎರಡೂ ಬಣಗಳನ್ನು ಚಡಚಣ ಪೊಲೀಸ್ ಠಾಣೆಗೆ ‌ಕರೆಯಿಸಿ ಸಂದಾನ ಮಾಡಲು ಅವರು ಪ್ರಯತ್ನಿಸಿದರು.

ಈ ಹಿಂದೆ ಉತ್ತರ ವಲಯದ ಐಜಿಪಿ ಆಗಿದ್ದ ಅಲೋಕ್​ಕುಮಾರ್​, ಉಭಯ ಬಣಗಳಿಗೆ ಶಸ್ತ್ರ ತ್ಯಜಿಸಿ ಒಟ್ಟಿಗೆ ಬಾಳುವಂತೆ ಬುದ್ಧಿಮಾತು ಹೇಳಿದ್ದರು. ಆದರೂ, ಮಹಾದೇವ ಬೈರಗೊಂಡ ಮೇಲೆ ಗುಂಡಿನ ದಾಳಿ ನಡೆದಿತ್ತು. ಈಗ ಎಡಿಜಿಪಿಯಾಗಿ ಭೀಮಾತೀರಕ್ಕೆ ಭೇಟಿ ನೀಡಿದ ಅವರು ಮತ್ತೊಮ್ಮೆ ಎರಡು ಬಣಗಳಿಗೆ ತಿಳಿ ಹೇಳುವ ಜೊತೆಗೆ ಖಡಕ್​ ಎಚ್ಚರಿಕೆಯನ್ನೂ ಕೊಟ್ಟರು.

ಚಡಚಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ

ಈ ಮಧ್ಯೆ ಸಂಧಾನಕ್ಕೆ ಕರೆಸಿದ್ದ ಬಣಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ಯಾರೂ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಮೇಲ್ನೋಟಕ್ಕೆ ನಾವು ರಕ್ತಸಿಕ್ತ ಚರಿತ್ರೆಯಿಂದ ಹೊರಬಂದು ಉತ್ತಮ ಜೀವನ ನಡೆಸುತ್ತೇವೆ ಎಂದು ಹೇಳಿದರೇ ಹೊರತು ಎರಡು ಕುಟುಂಬ ಒಟ್ಟಿಗೆ ಬಾಳಲು ಆಸಕ್ತಿ ತೋರಲಿಲ್ಲ. ಇದರಿಂದ ಕೋಪಗೊಂಡ ಅಲೋಕ್​ ಕುಮಾರ್​, ಚಡಚಣ ಕುಟುಂಬದವರಿಗೆ ಎಚ್ಚರಿಕೆ ನೀಡಿ, ಕಳೆದ ಒಂದು ದಶಕದಿಂದ ತಲೆಮರೆಸಿಕೊಂಡಿರುವ ಮಲ್ಲಿಕಾರ್ಜನ ಚಡಚಣನನ್ನು ಶರಣಾಗತಿ ಮಾಡಿಸುವಂತೆ ಸೂಚಿಸಿದರು. ಆತನ ಪತ್ನಿ ವಿಮಲಾಬಾಯಿ ಚಡಚಣ ಸಹ ನಾಪತ್ತೆಯಾಗಿದ್ದು, ಅವಳಿಗೂ ಬುದ್ಧಿವಾದ ಹೇಳುವಂತೆ ತಿಳಿಸಿದರು.

ಇದಕ್ಕೂ ಮೊದಲು ಚಡಚಣದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಿತು. ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದಾಗ ಬಹುತೇಕರು, ನಮ್ಮ ಚಡಚಣ ಭಾಗವನ್ನು ಭೀಮಾತೀರದ ಹಂತಕರು ಎಂದು ಕರೆಯುತ್ತಾರೆ. ಇದರಿಂದ ನಮ್ಮ ತಾಲೂಕಿನ ಯಾರೂ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ, ತಾಲೂಕಿಗೆ ಅಂಟಿರುವ ಭೀಮಾತೀರದ ಹಂತಕರೆನ್ನುವ ಕೆಟ್ಟ ಹೆಸರನ್ನು ಮೊದಲು ಮುಕ್ತಗೊಳಿಸಿ ಎಂದು‌ ಮನವಿ ಸಲ್ಲಿಸಿದರು. ಇದರ ಜೊತೆಗೆ ಮಹಾರಾಷ್ಟ್ರ ಗಡಿಭಾಗವಾಗಿರುವ ಕಾರಣ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ, ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎನ್ನುವ ಹತ್ತು ಹಲವು ಬೇಡಿಕೆಗಳನ್ನು ಎಡಿಜಿಪಿ ಮುಂದಿಟ್ಟರು.‌ ಇದಕ್ಕೆ ಸ್ಪಂದಿಸಿದ ಎಡಿಜಿಪಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದನ್ನೂ ಓದಿ:ಸಿಸಿಟಿವಿ ಅಳವಡಿಕೆ, ಸೆಕ್ಯೂರಿಟಿ ನೇಮಕಕ್ಕೆ ಹೋಟೆಲ್​, ಮಾಲ್​ಗಳಿಗೆ ಡೆಡ್​ಲೈನ್​ ನೀಡಿದ ಎಡಿಜಿಪಿ ಅಲೋಕ್ ಕುಮಾರ್

Last Updated : Jul 20, 2022, 12:15 PM IST

ABOUT THE AUTHOR

...view details