ವಿಜಯಪುರ:ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಯತ್ನ ಪ್ರಕರಣದ ಸೂತ್ರಧಾರ ಮಲ್ಲಿಕಾರ್ಜುನ ಚಡಚಣ ಹಾಗೂ ತಲೆ ಮರೆಸಿಕೊಂಡಿರುವ ಆತನ ಆತನ ಕುಟುಂಬ ಸದಸ್ಯರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, 2020ರ ನವೆಂಬರ್ 2ರಂದು ಕನ್ನೊಳ್ಳಿ ಕ್ರಾಸ್ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಭೈರಗೊಂಡ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಅವರ ಗನ್ ಮ್ಯಾನ್, ಸಹಚರ ಗುಂಡಿನ ಸಾವನ್ನಪ್ಪಿದ್ದರು. ಆದರೆ ದಾಳಿಯಲ್ಲಿ ಭೈರಗೊಂಡ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.
ತಲೆಮರೆಸಿಕೊಂಡವರ ಜಾಡು ಪತ್ತೆಗಿಳಿದ ಪೊಲೀಸರು ಈ ದಾಳಿಗೆ ಎರಡು ಕುಟುಂಬಗಳ ದ್ವೇಷ ಕಾರಣವಾಗಿದ್ದು, ಧರ್ಮರಾಜ್ ಚಡಚಣ ಹಾಗೂ ಆತನ ಸಹೋದರನ ಕೊಲೆ ಸೇಡು ತೀರಿಸಿಕೊಳ್ಳಲು ಅವರ ತಂದೆ ಮಲ್ಲಿಕಾರ್ಜುನ ಚಡಚಣ ಹಾಗೂ ಕುಟುಂಬದವರು ಶೂಟೌಟ್ ಸೂತ್ರಧಾರರಾಗಿದ್ದಾರೆ ಎಂದು ತಿಳಿದುಬಂದಿತ್ತು.
ಶೂಟೌಟ್ ಪ್ರಕರಣದಲ್ಲಿ ಒಟ್ಟು 40 ಜನ ಆರೋಪಿಗಳು ಶಾಮಿಲಾಗಿದ್ದು, ಅವರಲ್ಲಿ ಈಗಾಗಲೇ 36 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣ ಭೇದಿಸಲು 10 ಪೊಲೀಸ್ ಅಧಿಕಾರಿಗಳು ಸೇರಿ ನೂರಾರು ಪೊಲೀಸರ ತಂಡ ರಚಿಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಮಲ್ಲಿಕಾರ್ಜುನ ಚಡಚಣ, ಅವರ ಕುಟುಂಬದ ಸದಸ್ಯರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದರು.
ಇದನ್ನೂ ಓದಿ:ಮೈಲಾರಲಿಂಗೇಶ್ವರ ಕಾರಣಿಕ: 'ಮುತ್ತಿನ ರಾಶಿ ಮೂರು ಪಾಲು ಆದಿತಲೇ ಪರಾಕ್ '...ಏನಿದರ ಅರ್ಥ?