ವಿಜಯಪುರ : ಈ ವರ್ಷ ವಿಧಾನಸಭೆ ಚುನಾವಣೆ ಇದೆ. ಪಕ್ಷಗಳು ಜಾತಿ ಮತ್ತು ಧರ್ಮದ ವಿಚಾರದಲ್ಲಿ ಸಂಘರ್ಷ ಮಾಡುತ್ತಿರುವುದನ್ನು ಕಂಡು ಜನ ಬೇಸತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಬಾಳೆ ಹೊನ್ನೂರಿನ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನದ ಪೀಠಾಧಿಪತಿ ಡಾ. ವೀರಸೋಮೇಶ್ವರ ಜಗದ್ಗುರು ತಿಳಿಸಿದರು.
ಆಲಮಟ್ಟಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎರಡು ಸಮಾಜಗಳ ಸಂಘರ್ಷವು ಪ್ರಗತಿಗೆ ಅಡ್ಡಿಯಾಗುತ್ತದೆ. ಇದಕ್ಕೆ ರಾಜಕೀಯ ಪಕ್ಷಗಳು ಪ್ರಚೋದನೆ ಕೊಡುವುದು ಒಳ್ಳೆಯದಲ್ಲ. ಎಲ್ಲ ವರ್ಗದ, ಎಲ್ಲ ಸಮುದಾಯದ ಜನರನ್ನು ಸಮನಾಗಿ ಕಾಣಬೇಕು. ರಾಜಕಾರಣಿಗಳು ಸಮಾಜದ ಅಭಿವೃದ್ಧಿಗೆ ಗಮನ ಹರಿಸಬೇಕು. ನಾಡಿಗೆ ಅನ್ನವನ್ನು ಕೊಡುವ ರೈತನ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುವ ಅಗತ್ಯ ಇದೆ ಎಂದು ಇದೇ ವೇಳೆ ಹೇಳಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ಮೀಸಲಾತಿ ಕೊಡಲಿ :ಮೀಸಲಾತಿ ಕೇಳುವುದು ಎಲ್ಲರ ಹಕ್ಕು. ಅದು ತಪ್ಪಲ್ಲ. ಭಾರತದ ಸಂವಿಧಾನದಲ್ಲಿ ಯಾರಿಗೆ ಎಷ್ಟು ಮೀಸಲಾತಿ ಕೊಡಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಇದನ್ನು ಜಾರಿಗೆ ತರುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು ಎಂದು ಹೇಳಿದರು. ಆರ್ಥಿಕವಾಗಿ ದುರ್ಬಲ ಇದ್ದವರು, ಹಿಂದುಳಿದವರು ಮೀಸಲಾತಿ ಕೇಳುತ್ತಿದ್ದಾರೆ. ಅಂತವರಿಗೆ ಸರ್ಕಾರ ಸೌಲಭ್ಯ ಕೊಡಲಿ. ಇದರಿಂದ ನಮಗೆ ಸಂತಸ ವಾಗುತ್ತದೆ. ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.
ಇನ್ನು ಜಾತಿಯಲ್ಲಿ ಉನ್ನತವಾಗಿರುವವರು, ಆದರೆ ಬಡತನದಲ್ಲಿರುವ ಜಾತಿಯ ಜನತೆಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಉನ್ನತ ಜಾತಿಯಲ್ಲಿರುವ ಬಡವರ ಸಮಸ್ಯೆ ಬಗೆಹರಿಸುವ ಕೆಲಸವನ್ನೂ ರಾಜಕಾರಣಿಗಳು ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.