ವಿಜಯಪುರ: ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಇಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಮೊದಲು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯನ್ನು ಸ್ಮರಿಸಿದರು. ಶ್ರೀಗಳನ್ನು ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಸ್ವಾಗತಿಸಿದರು. ಇದಾದ ನಂತರ ಪೇಜಾವರ ಶ್ರೀಗಳು ವಿಜಯಪುರ ನಗರದ ದಲಿತರ ಮನೆಗಳಿಗೆ ಭೇಟಿ ನೀಡಿ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡಿದರು.
ಇದೇ ವೇಳೆ ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳ ಪಾದಪೂಜೆ ಕೂಡ ಮಾಡಲಾಯಿತು. ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಗೋಪಾಲ್ ಘಟಕಾಂಬಳೆ ಮನೆಯಲ್ಲಿ ಪಾದಪೂಜೆ ಮಾಡಲಾಯಿತು. ಬಂದಂತಹ ಭಕ್ತರಿಗೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಮಾಡಿ ಪ್ರಸಾದದ ರೂಪವಾಗಿ ಬಾಳೆಹಣ್ಣನ್ನ ವಿತರಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಮಾಡುವ ವಿಷಯದಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ. ಹಾಗಾಗಿ ಆ ಮಂದಿರದ ಉದ್ಘಾಟನೆಗೆ ಆ ಹಬ್ಬಕ್ಕೆ ಎಲ್ಲರನ್ನು ಆಹ್ವಾನಿಸುವುದು ನಮ್ಮ ಕರ್ತವ್ಯ ಎಂದರು.
10 ಕೋಟಿ ಧನ ಸಂಗ್ರಹಿಸಿ ರಾಮ ಮಂದಿರಕ್ಕೆ ಕೊಟ್ಟಿದ್ದೇವೆ, ಆಹ್ವಾನ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯಿಸಿದ ಶ್ರೀಗಳು, ದೊಡ್ಡ ಮೊತ್ತದ ದೇಣಿಗೆ ಕೊಟ್ಟವರು ಬಹಳ ಮಂದಿ ಇದ್ದಾರೆ. ಅಷ್ಟು ಮಂದಿ ಕರೆದು ಕೂಡಿಸುವ ವ್ಯವಸ್ಥೆ ಅಲ್ಲಿ ಇಲ್ಲ. ಕೆಲವರನ್ನು ಕರೆದರೆ ಮಾತ್ರ ಕಾರ್ಯಕ್ರಮ ನಡೆಸಲು ಸಾಧ್ಯ ಆಗುತ್ತೆ. ಆ ದಿನ ಬರಲು ಅವಕಾಶ ಇಲ್ಲ, ಮುಂದಿನ ದಿನ ಬರಲಿಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಇದೆ. ವಿಶ್ವ ಹಿಂದೂ ಪರಿಷತ್ ಹಿರಿಯ ಸದಸ್ಯರಿಗೂ ಯಾರು ಬರಬೇಡಿ ಎನ್ನುವ ಸಂದೇಶ ಇದೆ. ಮುಂದಿನ ದಿನಗಳಲ್ಲಿ ಬನ್ನಿ ಎಂದು ಹೇಳಿದ್ದಾರೆ.