ಮುದ್ದೇಬಿಹಾಳ:ಕೊರೊನಾ ಹೆಚ್ಚಳ ಹಿನ್ನೆಲೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹೋಟೆಲ್ಗಳ ಮೇಲೆ ಪಟ್ಟಣದ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ ಘಟನೆ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದ ಮುಂದೆ ಹಾಗೂ ಅಕ್ಕಪಕ್ಕದಲ್ಲಿರುವ, ಕ್ಯಾಂಟಿನ್, ಹೋಟೆಲ್ಗಳಲ್ಲಿ ಜನರನ್ನು ಕೂಡಿಸಿ ವ್ಯಾಪಾರ ಮಾಡಲಾಗುತ್ತಿತ್ತು. ಇದು ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲ ಅಂಗಡಿಕಾರರಿಗೆ ದಂಡ ವಿಧಿಸಿದರು. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದರೆ ಅಂಗಡಿ ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಅಂಗಡಿಕಾರರಿಗೆ ತಲಾ ಐದು ಸಾವಿರ ರೂ.ಗಳಂತೆ ದಂಡ ಹಾಕಿದ್ದೇವೆ. ದಂಡದ ಹಣ ಪಾವತಿಸಿದಿದ್ದರೆ ನೇರವಾಗಿ ಕೇಸ್ ದಾಖಲು ಮಾಡಲಾಗುತ್ತದೆ ಎಂದರು.
ಹೋಟೆಲ್ನಿಂದ ಹೊರ ಓಡಿದ ಗ್ರಾಹಕರು:
ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಕೀರ್ತಿ ಸಾಗರ ಹೋಟೆಲ್‌ನಲ್ಲಿ ಕೋವಿಡ್ ಭಯವಿಲ್ಲದೇ ಆರಾಮವಾಗಿ ಅಲ್ಪೋಪಹಾರ ಸೇವಿಸುತ್ತಿದ್ದ ಗ್ರಾಹಕರು, ಪೊಲೀಸರು, ಅಧಿಕಾರಿಗಳು ಅಂಗಡಿಯೊಳಗೆ ಬರುತ್ತಲೇ ಹೊರಗೋಡಿ ಬಂದರು. ಕೆಲವರು ಅಂಗಡಿಯಾತನಿಗೆ ಬಿಲ್ ಕೊಡದೇ ಸಿಕ್ಕಿದ್ದೇ ಅವಕಾಶ ಎಂದು ಪಲಾಯನ ಮಾಡಿದ ಘಟನೆ ನಡೆಯಿತು.
ಮನೆ ಮನೆಗೆ ತೆರಳಿ ನ್ಯಾಯಾಧೀಶರಿಂದ ಜಾಗೃತಿ:ಪಟ್ಟಣದ ಮಾರುತಿ ನಗರದಲ್ಲಿ ನ್ಯಾಯಾಧೀಶರು ಮನೆ ಮನೆಗೆ ತೆರಳಿ ಕೊರೊನಾ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕದೇ ಇರುವವರಿಗೆ ಖಡಕ್ ವಾರ್ನಿಂಗ್ ನೀಡಿ ಸಾಂಕ್ರಾಮಿಕ ರೋಗದ ಭೀತಿಯಿಂದ ದೂರವಾಗಲು ತಿಳಿವಳಿಕೆ ಹೇಳಿದರು.