ವಿಜಯಪುರ: ಹಲವು ತಪ್ಪುಗಳನ್ನು ಮಾಡಿ ಜೈಲು ಸೇರುವ ಖೈದಿಗಳು, ಬಳಿಕ ಬಿಡುಗಡೆಗೊಂಡು ನಾಗರಿಕ ಸಮಾಜಕ್ಕೆ ಮರಳುವಾಗ ಉತ್ತಮ ಪ್ರಜೆಗಳಾಗಲಿ ಎನ್ನುವ ಉದ್ದೇಶದಿಂದ ಅವರ ಮನಪರಿವರ್ತನೆಗೆ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹ ಹೊಸ ಹೆಜ್ಜೆಯೊಂದನ್ನಿಟ್ಟಿದೆ. ಇಲ್ಲಿನ ಖೈದಿಗಳಿಗೆ ಸಾಕ್ಷರತೆಯ ಪಾಠದ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಯೋಗ ಶಿಬಿರಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ಖೈದಿಗಳಿಂದಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ಸೇರಿ ಶಿಕ್ಷೆಗೆ ಒಳಗಾಗಿರುವ ಒಟ್ಟು 725 ಖೈದಿಗಳಿದ್ದಾರೆ.
ಖೈದಿಗಳ ಮನಃಪರಿವರ್ತನೆ ಹಾಗೂ ಅವರಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸುವ ದೃಷ್ಟಿಯಿಂದ ವಿವಿಧ ಸ್ವಾಮೀಜಿಗಳಿಂದ ಪ್ರವಚನ ಹಾಗೂ ಯೋಗಪಟುಗಳಿಂದ ಯೋಗಾಶನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಖೈದಿಗಳು ಬಿಡುಗಡೆ ಹೊಂದಿದ ಮೇಲೆ ಮತ್ತೊಮ್ಮೆ ಅಪರಾಧ ಚಟುವಟಿಕೆಗಳತ್ತ ಹೋಗಬಾರದು ಎನ್ನುವ ಸಂಕಲ್ಪವನ್ನಿಟ್ಟುಕೊಂಡು ಕೇಂದ್ರ ಕಾರಾಗೃಹ ಅಧಿಕಾರಿಗಳು ಈ ಪ್ರಯೋಗವನ್ನು ನಡೆಸುತ್ತಿದ್ದಾರೆ. ಇದು ಕೆಲ ವರ್ಷಗಳಿಂದ ಯಶಸ್ವಿಯೂ ಆಗುತ್ತಿದೆ. ಶಿಕ್ಷೆ ಅನುಭವಿಸಿ ಹೊರಹೋಗಿರುವ ಸಾಕಷ್ಟು ಖೈದಿಗಳು ತಮ್ಮ ಮನಪರಿವರ್ತನೆ ಮಾಡಿಕೊಂಡು ತಮ್ಮ ಕುಟುಂಬದ ಜತೆ ನೆಮ್ಮದಿಯಾಗಿದ್ದಾರೆ ಎಂದು ವಿಜಯಪುರ ಕೇಂದ್ರ ಕಾರಾಗೃಹ ಅಧೀಕ್ಷಕ ಡಾ.ಐ.ಜೆ ಮ್ಯಾಗೇರಿ ಹೇಳುತ್ತಾರೆ.