ಶಾಸಕರ ಅನುದಾನದ ಬಗ್ಗೆ ಪ್ರಶ್ನಿಸುವ ಹಕ್ಕು ಪುರಸಭೆ ಸದಸ್ಯರಿಗಿಲ್ಲ: ಶಾಸಕ ನಡಹಳ್ಳಿ
ಎಸ್ಎಫ್ಸಿ ಹಾಗೂ ಪುರಸಭೆ ಅನುದಾನದಲ್ಲಿ ತ್ರಿಚಕ್ರ ವಾಹನ ಹಾಗೂ ಎಸ್ಸಿ,ಎಸ್ಟಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಪುರಸಭೆ ಸದಸ್ಯರು ವಿತರಿಸಿದರು.
ಸ್ಸಿ,ಎಸ್ಟಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ
ಮುದ್ದೇಬಿಹಾಳ:ಪಟ್ಟಣದ ಪುರಸಭೆ ವತಿಯಿಂದ 2017-18 ಹಾಗೂ 2019-20ನೇ ಸಾಲಿನ ಎಸ್ಎಫ್ಸಿ ಹಾಗೂ ಪುರಸಭೆ ಅನುದಾನದಲ್ಲಿ ತ್ರಿಚಕ್ರ ವಾಹನ ಹಾಗೂ ಎಸ್ಸಿ,ಎಸ್ಟಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಪುರಸಭೆ ಸದಸ್ಯರು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಶಾಸಕರ ಅನುದಾನದ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಪುರಸಭೆ ಸದಸ್ಯರಿಗಿಲ್ಲ. ಅದೇ ರೀತಿ ಪುರಸಭೆಯ ಆಡಳಿತದಲ್ಲಿ ನಾನೆಂದು ಹಸ್ತಕ್ಷೇಪ ಮಾಡುವುದಿಲ್ಲ. ಪಟ್ಟಣದ ಅಭಿವೃದ್ಧಿಗೆ ನಿಮ್ಮ ಕೈಲಾದಷ್ಟು ನೀವು ಸೇವೆ ಮಾಡಿ. ನನ್ನ ಕೈಲಾದಷ್ಟು ನಾನು ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಅಧಿಕಾರಿಗಳೊಂದಿಗೆ ಸದಸ್ಯನ ವಾಗ್ವಾದ:
ಸದಸ್ಯ ಮಹಿಬೂಬ ಗೊಳಸಂಗಿ, ಶಿವು ಶಿವಪೂರ ಕಾರ್ಯಕ್ರಮ ಆರಂಭವಾಗುತ್ತಲೇ ವೇದಿಕೆಯ ಬಳಿ ಬಂದು ಇದು ಬಿಜೆಪಿ ಪಕ್ಷದ ಕಾರ್ಯಕ್ರಮವೋ ಪುರಸಭೆ ಕಾರ್ಯಕ್ರಮವೋ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಜೊತೆಗೆ ಪಕ್ಷದ ಮುಖಂಡರಾದ ವಿಕ್ರಂ ಓಸ್ವಾಲ, ಮಾಜಿ ಸದಸ್ಯ ಮನೋಹರ ತುಪ್ಪದ ವೇದಿಕೆಯಲ್ಲಿದ್ದರು. ಪುರಸಭೆ ಸದಸ್ಯರಿಗೆ ಇನ್ನೂ ಅಧಿಕಾರಿಗಳು ಆಹ್ವಾನ ನೀಡಿರಲಿಲ್ಲ. ಈ ವೇಳೆ ಸದಸ್ಯ ಗೊಳಸಂಗಿ, ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಜೋರು ಧ್ವನಿಯಲ್ಲಿ ಇದು ಪಕ್ಷದ ಕಾರ್ಯಕ್ರಮವೇ? ಎಂದು ಪ್ರಶ್ನಿಸಿದರು.
ಬಳಿಕ ಅಧಿಕಾರಿಗಳು, ಬಿಜೆಪಿ ಮುಖಂಡರು, ಪುರಸಭೆ ಸದಸ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಶಾಸಕರು ಸಹಕಾರ ಕೊಟ್ಟರೆ ನಾವು ಅಂತಹ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ತಂದುಕೊಡಬಹುದು. ಸಹಕಾರ ನೀಡದಿದ್ದರೆ ಅಲ್ಲಿ ಅನುದಾನ ಕೊಡಲು ಹಿಂದೇಟು ಹಾಕಬೇಕಾಗುತ್ತದೆ ಎಂದರು.
ಸದ್ಯಕ್ಕೆ ಆಡಳಿತಾಧಿಕಾರಿಗಳ ಅಧಿಕಾರ ಪುರಸಭೆಯಲ್ಲಿದೆ. ಅಧಿಕಾರಿಗಳು ರೂಪಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿ ನಿಟ್ಟಿನಲ್ಲಿ ಜನಪ್ರತಿನಿಧಿಗಳಾದವರು ಸಹಕಾರ ಮಾಡಬೇಕು ಎಂದರು. ಪೂರ್ವಾಗ್ರಹ ಪೀಡಿತರಾಗಿ ಶಾಸಕ ಬಿಜೆಪಿಯವರಿಗಿದ್ದು ಕಾಂಗ್ರೆಸ್‌ನ ಸದಸ್ಯರಿಗೆ ಸಹಕಾರ ಕೊಡ್ತಾರೋ, ಇಲ್ಲವೋ ಎಂಬ ಭಾವನೆ ಬೇಡ. ಚುನಾವಣೆ ಬಂದಾಗಲಷ್ಟೇ ರಾಜಕೀಯ ಮಾಡೋಣ. ಆಯ್ಕೆಯಾದ ಬಳಿಕ ಎಲ್ಲರೂ ಒಗ್ಗೂಡಿ ಅಭಿವೃದ್ಧಿಗೆ ಮುಂದಾಗೋಣ ಎಂದು ಹೇಳಿದರು.