ಮುದ್ದೇಬಿಹಾಳ: ಮತಕ್ಷೇತ್ರದ ಮುದ್ದೇಬಿಹಾಳ, ತಾಳಿಕೋಟೆ ಪುರಸಭೆ ವ್ಯಾಪ್ತಿ ಹಾಗೂ ನಾಲತವಾಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 250 ಎಕರೆಗಿಂತಲೂ ಹೆಚ್ಚು ಸಾರ್ವಜನಿಕ ಜಮೀನು ಇದ್ದು ಅದನ್ನು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಬಿಜೆಎನ್‌ಎಲ್ ವತಿಯಿಂದ ಅಭಿವೃದ್ಧಿಪಡಿಸಲಾಗುವುದು ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಕೆಬಿಜೆಎನ್‌ಎಲ್ ಅರಣ್ಯ ವಿಭಾಗ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಅರಣ್ಯ ಸಂಪತ್ತು ವೃದ್ಧಿಸುವ ಸಲುವಾಗಿ ತಾಲೂಕಿನ ಶಿರೋಳದಿಂದ ಬಿದರಕುಂದಿಯವರೆಗೆ ಆವರಿಸಿಕೊಂಡಿರುವ ಗುಡ್ಡದಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕರು ಹೇಳಿದರು.
ಕೆಬಿಜೆಎನ್‌ಎಲ್ ಅರಣ್ಯ ವಿಭಾಗ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆ ಸಾರ್ವಜನಿಕವಾಗಿ ಇರುವ ಆಸ್ತಿಗಳಲ್ಲಿ ಆದ್ಯತೆ ಮೇರೆಗೆ ಮೂರು ನಗರ ಪ್ರದೇಶಗಳಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು. ಬರೀ ಕೆನಾಲ್ ಮಾಡುವುದೇ ನೀರಾವರಿ ಅಲ್ಲ. ಆಲಮಟ್ಟಿ, ನಾರಾಯಣಪೂರ ಜಲಾಶಯದ ಸಲುವಾಗಿ ಮುದ್ದೇಬಿಹಾಳ ಹಾಗೂ ಹುನಗುಂದ ತಾಲೂಕಿನ ಬಹುತೇಕ ಸಾವಿರಾರು ರೈತರು ಫಲವತ್ತಾದ ಜಮೀನು ಕಳೆದುಕೊಂಡಿದ್ದಾರೆ. ಆದರೆ ಅಲ್ಲಿ ಒದಗಿಸಬೇಕಾದ ಸೌಲಭ್ಯಗಳನ್ನು ಇನ್ನೂವರೆಗೂ ನಿರೀಕ್ಷಿತಮಟ್ಟದಲ್ಲಿ ಒದಗಿಸಿಲ್ಲ. ಬೆಂಗಳೂರಿನಲ್ಲಿ ಕೂತಿರುವ ಅಧಿಕಾರಿಗಳಿಗೆ ಈ ಭಾಗದ ಅಣೆಕಟ್ಟು ನಿರ್ಮಾಣವಾಗಲು ತ್ಯಾಗ ಮಾಡಿದ ಜನರು ಕಾಣುವುದಿಲ್ಲ ಎಂದು ಹೇಳಿದರು.
ಮುದ್ದೇಬಿಹಾಳದಲ್ಲಿ 22 ಕೋಟಿ ರೂ.ವೆಚ್ಚದಲ್ಲಿ 65 ಗಾರ್ಡನ್‌ಗಳ ಅಭಿವೃದ್ಧಿ ಮಾಡಲಾಗುವುದು. ಹಾಗೆಯೇ 10 ಪುನರ್ವಸತಿ ಕೇಂದ್ರಗಳಲ್ಲೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ರಾಕ್ ಗಾರ್ಡನ್ ಮಾಡಲು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಲು ತಿಳಿಸಿದ್ದೇನೆ ಎಂದು ಹೇಳಿದರು.
ಸಭೆಯಲ್ಲಿ ಮುಖ್ಯಾಧಿಕಾರಿಗಳಾದ ಗೋಪಾಲ ಕಾಸೆ, ಸಿ.ವಿ.ಕುಲಕರ್ಣಿ, ಎಂ.ಆರ್.ದಾಯಿ, ಕೆಬಿಜೆಎನ್‌ಎಲ್ ಆರ್‌ಎಫ್ಒ ಮಹೇಶ ಪಾಟೀಲ, ಪಿ.ಕೆ.ಪೈ,ಎಸಿಎಫ್ ಎನ್.ಕೆ.ಬಾಗಾಯತ್, ಆರ್.ಎ.ಪ್ಯಾಟಿಗೌಡರ, ಮೃತ್ಯುಂಜಯ ಬಿದರಕುಂದಿ ಇದ್ದರು.