ಮುದ್ದೇಬಿಹಾಳ(ವಿಜಯಪುರ): ಮುದ್ದೇಬಿಹಾಳ ಪಟ್ಟಣದ ಹುಡ್ಕೋ ನಿವಾಸಿ, ಜಿಓಸಿಸಿ ಬ್ಯಾಂಕ್ ಅಧ್ಯಕ್ಷ, ಕೃಷಿ ಅಧಿಕಾರಿಯೂ ಆಗಿರುವ ಅರವಿಂದ ಹೂಗಾರ ಅವರ ಪುತ್ರಿ ವಿನಯಾ ಹೂಗಾರ ಕೆಪಿಎಸ್‌ಸಿ ನಡೆಸುವ ಪರೀಕ್ಷೆಯಲ್ಲಿ 11ನೇ ರ‍್ಯಾಂಕ್ ಪಡೆಯುವ ಮೂಲಕ ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿನಯಾ ಹೂಗಾರ ಯಾವುದೇ ತರಬೇತಿ ಕೇಂದ್ರಗಳಿಗೆ ಹೋಗದೇ ಪರೀಕ್ಷೆ ಎದುರಿಸಿ ಇದೀಗ ರ‍್ಯಾಂಕ್ ಬಂದಿರುವುದು ಒಂದು ಸಾಧನೆಯೇ ಸರಿ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮುಗಿಸಿದ ನಂತರ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. 2020ರಲ್ಲಿ ಕರೆದಿದ್ದ ಕೆಎಎಸ್ ಪರೀಕ್ಷೆಗೆ ಹಾಜರಾಗಿ 11ನೇ ರ‍್ಯಾಂಕ್ ಪಡೆದುಕೊಂಡು ಸಾಧನೆ ಮಾಡಿದ್ದಾರೆ.
ಮುದ್ದೇಬಿಹಾಳದ ಸಂತ ಕನಕದಾಸ ಶಾಲೆಯಲ್ಲಿ 1ರಿಂದ 5ನೇ ತರಗತಿ ಓದಿರುವ ವಿನಯಾ ಅವರು 6ರಿಂದ 10ನೇ ತರಗತಿಯನ್ನು ಕಿತ್ತೂರ ರಾಣಿ ಚೆನ್ನಮ್ಮ ಶಾಲೆಯಲ್ಲಿ ಓದಿದ್ದಾರೆ. 10ನೇ ತರಗತಿಯನ್ನು ಸೈನಿಕ ಶಾಲೆಯಲ್ಲಿ ಓದಿ ಶೇ.96 ಅಂಕಗಳೊಂದಿಗೆ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಮೂಡಬಿದಿರೆಯಲ್ಲಿ ಪಿಯುಸಿ ಶಿಕ್ಷಣವನ್ನು ಉಚಿತವಾಗಿ ಪೂರೈಸಿದ್ದಾರೆ.