ವಿಜಯಪುರ:ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಸಚಿವ ಎಂ. ಬಿ ಪಾಟೀಲ ನೀಡಿದ ಎಚ್ಚರಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎಂದು ತಿರುಗೇಟು ನೀಡಿದ್ದಾರೆ.
ನೂತನ ಸಚಿವರಾಗಿ ಮೊನ್ನೆ ಎಂ. ಬಿ. ಪಾಟೀಲ ಅವರು ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗೋಷ್ಟಿಯಲ್ಲಿ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಮಾತನಾಡಿ, ಅವರು ಇದೇ ರೀತಿ ವರ್ತನೆ ತೋರಿದರೆ ಜೈಲಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದಕ್ಕೆ ಯತ್ನಾಳ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ‘ಯಾರೇ ಮಾತಾಡಿದರೂ ಜೈಲಿಗೆ ಹಾಕ್ತೀವಿ ಅಂತ ಹೇಳೋಕೆ ಇದು ತಾಲಿಬಾನ್ ಆಡಳಿತ ಅಲ್ಲ. ಕರ್ನಾಟಕ ಎನ್ನುವುದನ್ನು ಸಚಿವ ಎಂ. ಬಿ. ಪಾಟೀಲರು ಮರೆಯಬಾರದು’ ಎಂದು ಹೇಳಿದ್ದಾರೆ.
‘ಜೈಲಿಗೆ ಕಳಿಸ್ತೀವಿ’ ಎಂದು ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರಾ? ಎಂದು ಪ್ರಶ್ನೆ ಮಾಡಿರುವ ಯತ್ನಾಳ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಂತ್ರಿಗಳು ಅಸಹಿಷ್ಣುಗಳು ಆಗಬಾರದು ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ನಾಲ್ಕು ವರ್ಷ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು?:ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ. ಪಾಟೀಲ, ಯತ್ನಾಳ್ ಅವರೇ, ಕಳೆದ ನಾಲ್ಕು ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್ ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಸತತವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಎಂ.ಬಿ. ಪಾಟೀಲರು ತೀಕ್ಷ್ಣವಾಗಿ ತಿರುಗೇಟು ನೀಡಿ ಮರು ಟ್ವೀಟ್ ಮಾಡಿದ್ದಾರೆ.