ವಿಜಯಪುರ:ಇಲ್ಲಿನ ವಿಶ್ವೇಶ್ವರನಗರದ ಮನೆಯೊಂದರಲ್ಲಿ ಯುವಕನ ಜೊತೆಗೆ ವಾಸವಿದ್ದ ಬಾಲಕಿಯ ಮೃತದೇಹವು ಶನಿವಾರ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪ್ರಾಪ್ತೆಯು ಯುವಕನ ಜೊತೆಗೆ ವಿಜಯಪುರ ನಗರದ ಹೊರಭಾಗದ ಯೋಗಾಪುರ ಕಾಲೋನಿಯಲ್ಲಿ ವಾಸವಿದ್ದಳು ಎಂದು ತಿಳಿದುಬಂದಿದೆ.
ಪ್ರಥಮ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಾಗೂ ಯುವಕ ಸಂಜು ಹುಲ್ಲೂರು ಎಂಬಾತ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಯುವಕನೇ ಅಪ್ರಾಪ್ತೆಯನ್ನು ದೈಹಿಕವಾಗಿ ಬಳಸಿಕೊಂಡು ಕೊಲೆ ಮಾಡಿ, ಬಳಿಕ ನೇಣು ಹಾಕಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.