ಮುದ್ದೇಬಿಹಾಳ :ತಾಲೂಕಿನ ಸುಕ್ಷೇತ್ರ ಬಸರಕೋಡದ ಶ್ರೀ ಪವಾಡ ಬಸವೇಶ್ವರ ಜಾತ್ರೆ ಸಂದರ್ಭ ಸರ್ಕಾರದ ನಿಯಮ, ಪೊಲೀಸರ ಎಚ್ಚರಿಕೆ ಉಲ್ಲಂಘಿಸಿ ತೇರು ಎಳೆಯುವ ವೇಳೆ ರಥದ ಚಕ್ರದ ಕೆಳಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಪೊಲೀಸರ ಕಣ್ತಪ್ಪಿಸಿ ರಥೋತ್ಸವ: ತೇರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು, ಎಂಟು ಜನರ ವಶಕ್ಕೆ ಪಡೆದ ಪೊಲೀಸ್ - ತೇರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
ಕೋವಿಡ್ ನಿಯಮ ಮುರಿದು ಪೊಲೀಸರ ಕಣ್ತಪ್ಪಿಸಿ ರಥೋತ್ಸವ ನಡೆಸುತ್ತಿದ್ದ ವೇಳೆ ರಥದ ಚಕ್ರದ ಕೆಳಗೆ ಸಿಲುಕಿ ವ್ಯಕ್ತಿ ಮೃತಪಟ್ಟ ಘಟನೆ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಬಸರಕೋಡದ ಶ್ರೀ ಪವಾಡ ಬಸವೇಶ್ವರ ಜಾತ್ರೆಯಲ್ಲಿ ನಡೆದಿದೆ.
ಮೃತವ್ಯಕ್ತಿಯನ್ನು ಬಸರಕೋಡ ಗ್ರಾಮದ ಕರಿಯಪ್ಪ ಬಸಪ್ಪ ಆರೇಶಂಕರ ಉರ್ಫ ಕಿಲ್ಲೇದ(45) ಎಂದು ಗುರ್ತಿಸಲಾಗಿದೆ. ದೇವಸ್ಥಾನ ಕಮಿಟಿಯವರು ಜಾತ್ರೆ ರದ್ದು ಮಾಡಿದ್ದು ಸಾರ್ವಜನಿಕರು ಜಾತ್ರೆಗೆ ಬರಬಾರದು ಎಂದು ಪ್ರಕಟಣೆ ಹೊರಡಿಸಿದ್ದರು. ಅಲ್ಲದೇ ಜಾತ್ರೆ ನಡೆಸುವುದಿಲ್ಲ ಎಂದು ಪೊಲೀಸರಿಗೂ ಲಿಖಿತವಾಗಿ ಬರೆದು ಕೊಟ್ಟಿದ್ದರು. ಆದರೆ, ಬುಧವಾರ ಮಧ್ಯಾಹ್ನ ಪೊಲೀಸರ ಕಣ್ತಪ್ಪಿಸಿ ತೇರು ಎಳೆಯುವಾಗ ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಡಿಎಸ್ಪಿ ಅರುಣಕುಮಾರ ಕೋಳೂರು, ಸಿಪಿಐ ಆನಂದ ವಾಘಮೋಡೆ, ಪಿಎಸೈ ಎಂ.ಬಿ.ಬಿರಾದಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಬಗ್ಗೆ ಮಾತನಾಡಿರುವ ಡಿವೈಎಸ್ಪಿ ಅರುಣಕುಮಾರ ಕೋಳೂರ, ಜಾತ್ರಾ ಕಮಿಟಿಯ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾಗಿ ತಿಳಿಸಿದ್ದಾರೆ.ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.