ವಿಜಯಪುರ: ಆಪರೇಷನ್ ಕಮಲ ಎಂಬುದು ಪ್ರಜಾಸತ್ತಾತ್ಮಕ ವಿರೋಧಿಯಾಗಿದ್ದು, ಶಾಸಕರಿಗೆ ಹಣ ಕೊಟ್ಟು ರಾಜೀನಾಮೆ ಕೊಡಿಸಿ ಮತ್ತೊಮ್ಮೆ ಬೇರೆ ಚುನಾವಣೆಗೆ ನಿಲ್ಲಿಸಿ ಅವರ ಸಹಾಯದಿಂದ ಸರ್ಕಾರ ರಚಿಸುವುದು ಬಿಜೆಪಿಯ ಕೆಲಸ. ಇದು ಕರ್ನಾಟಕದಲ್ಲಿ ಆಗಿ ಹೋಗಿದೆ. ಈಗ ಮಹಾರಾಷ್ಟ್ರದ ಸರದಿ. ಇದು ಬಹಳ ದಿನ ನಡೆಯಲ್ಲ. ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಸಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ತಾವು ಮಾಡಿದ್ದೆಲ್ಲ ನಡೆಯುತ್ತದೆ ಎಂದು ತಿಳಿದುಕೊಂಡಿದೆ. ಎಲ್ಲಾ ಸಮಯದಲ್ಲಿ ಇದು ನಡೆಯೋದಿಲ್ಲ. ಮಹಾರಾಷ್ಟ್ರದ ಬೆಳವಣಿಗೆಯನ್ನು ಖಂಡಿಸುತ್ತೇನೆ. ಚುನಾವಣೆಯಲ್ಲಿ ನೇರವಾಗಿ ಆಯ್ಕೆಯಾಗಿ ಸರ್ಕಾರ ರಚಿಸಲಿ. ಕರ್ನಾಟಕದಲ್ಲಿ 17 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಕರೆದುಕೊಂಡು 40% ಕಮಿಷನ್ ಸರ್ಕಾರವನ್ನು ರಚನೆ ಮಾಡಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅಖಂಡ ಭಾರತ, ಅಖಂಡ ಕರ್ನಾಟಕ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಆಗಿರುವುದು. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕು. ಆದರೆ ಪ್ರತ್ಯೆಕ ರಾಜ್ಯ ಎನ್ನುವುದು ಸೂಕ್ತ ವಿಚಾರವಲ್ಲ ಎಂದು ಹೇಳಿದರು.