ವಿಜಯಪುರ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬದಲಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರಿಗೆ ನೀಡಬೇಕು ಎಂದು ವಿವಿಧ ಸಮುದಾಯದ ಮುಖಂಡರು ಹಾಗೂ ಪಕ್ಷದಿಂದ ಉಚ್ಚಾಟಿತ ಮುಖಂಡರು ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಮೂಲ ಮುಖಂಡರನ್ನು ಕೈಬಿಟ್ಟು ಬಸನಗೌಡ ಯತ್ನಾಳ್ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದರು. ಇದು ಭಿನ್ನಮತಕ್ಕೆ ಕಾರಣವಾಗಿತ್ತು. ಇದರಿಂದಾಗಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ 8 ಮುಖಂಡರು ಬಂಡಾಯವೆದ್ದು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದಾದ ನಂತರ ಯತ್ನಾಳ್ ಒತ್ತಡಕ್ಕೆ ಮಣಿದು 8 ಮುಖಂಡರನ್ನು ಉಚ್ಚಾಟಿಸಲಾಗಿತ್ತು. ಈಗ ಮತ್ತೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.
"ಯತ್ನಾಳ ಕಾರ್ಯಕರ್ತರೊಂದಿಗೆ ಬೆರೆಯುವುದಿಲ್ಲ. ಅವರಿಗೆ ಈ ಬಾರಿ ಟಿಕೆಟ್ ನೀಡಿದರೆ ಮೂಲ ಬಿಜೆಪಿ ಕಾರ್ಯಕರ್ತರು ತಟಸ್ಥವಾಗಿ ನಿಲ್ಲುವ ನಿಲುವು ತಾಳಿದ್ದಾರೆ. ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಕಳೆದ ಬಾರಿ ಟಿಕೆಟ್ ನೀಡದಿದ್ದರೂ ಪಕ್ಷ ಬಿಡದೇ ಪಕ್ಷನಿಷ್ಠೆ ತೋರಿದ್ದಾರೆ. ಭ್ರಷ್ಟಾಚಾರ ಮಾಡಿಲ್ಲ, ವಿಜಯಪುರ ನಗರ ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ಯತ್ನಾಳ ಪದೇ ಪದೇ ಹೇಳುತ್ತಾರೆ. ಆದರೆ ಅವರ ಪಿಎಗಳು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅದಕ್ಕೆ ಹಣ ಎಲ್ಲಿಂದ ಬಂತು? ಗುತ್ತಿಗೆದಾರರು ಹಣ ನೀಡದಿದ್ದರೆ ಅವರ ಕೆಲಸವಾಗುವುದಿಲ್ಲ" ಎಂದು ಉಚ್ಚಾಟಿತ ನಾಯಕ ರವೀಂದ್ರ ಲೋಣಿ ಗಂಭೀರ ಆರೋಪ ಮಾಡಿದ್ದಾರೆ.