ವಿಜಯಪುರ :ರಾಜ್ಯ ಸರ್ಕಾರ ಬಡವರಿಗಾಗಿ ಯಶಸ್ವಿನಿ ಯೋಜನೆಯನ್ನು 2023 ರ ಜನವರಿ 1 ರಿಂದ ಪುನಾರಂಭಿಸುತ್ತಿರುವುದು ಶ್ಲಾಘನೀಯ. ಆದರೆ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಸೇವಾ ಶುಲ್ಕ ಕಡಿಮೆಯಾಗಿದೆ ಎಂದು ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘದ ಮಾಜಿ ಅಧ್ಯಕ್ಷ ಡಾ ಎಲ್ ಎಚ್ ಬಿದರಿ ಆರೋಪಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಶಸ್ವಿನಿ ಯೋಜನೆ 2003 ರಲ್ಲಿ ಪ್ರಾರಂಭಗೊಂಡು 2018 ರವರೆಗೆ ಜಾರಿಯಲ್ಲಿತ್ತು. ಈ ಅವಧಿಯಲ್ಲಿ 14,07,208 ರೈತರು ಈ ಯೋಜನೆಯ ಲಾಭ ಪಡೆದಿದ್ದು, 24,48,496 ಸದಸ್ಯರು ಹೊರ ರೋಗಿಯಾಗಿ ಫಲಾನುಭವಿಗಳಾಗಿದ್ದಾರೆ. ರೈತರು ಯೋಜನೆಗಾಗಿ 730.26 ಕೋಟಿ ಸದಸ್ಯತ್ವ ನೋಂದಣಿ ಶುಲ್ಕ ಕೊಟ್ಟಿದ್ದು, ಕರ್ನಾಟಕ ಸರ್ಕಾರ 936 ಕೋಟಿ ಅನುದಾನ ನೀಡಿದೆ. ಸರಾಸರಿ 17 ಸಾವಿರ ವೆಚ್ಚದಲ್ಲಿ ಎಲ್ಲ ತರಹದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೀಗಿದ್ದರೂ ಇಂತಹ ಯೋಜನೆ ಬಂದ್ ಮಾಡಿದ್ದು ಖೇದಕರ ಎಂದರು.
ಇದೀಗ ಯೋಜನೆಯನ್ನು ಪುನಾರಂಭಿಸುತ್ತಿರುವುದು ಶ್ಲಾಘನೀಯವಾಗಿದೆ. ಆದರೆ 2010 ರಲ್ಲಿ ಯಶಸ್ವಿನಿ ಟ್ರಸ್ಟ್ ನಿಗದಿಪಡಿಸಿದ್ದ ಪ್ಯಾಕೇಜ್ಗಳನ್ನು 12 ವರ್ಷಗಳ ನಂತರ ಹಣದುಬ್ಬರ, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚ ಯಾವುದನ್ನೂ ಪರಿಗಣಿಸದೆ. ಸುವರ್ಣ ಆರೋಗ್ಯ ಟ್ರಸ್ಟ್ ದಲ್ಲಿ ನಿಗದಿಪಡಿಸಿದ ದರಗಳನ್ನು ಮರುಪ್ರಾರಂಭ ಮಾಡಿದ ಯಶಸ್ವಿನಿ ಯೋಜನೆಗೆ ಅನ್ವಯ ಮಾಡಿದ್ದು, ಅತ್ಯಂತ ಅಸಮಂಜಸ ಹಾಗೂ ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.