ವಿಜಯಪುರ: ಕೊರೊನಾ ಉಪತಳಿ ಜೆಎನ್ 1 ನಿಡಗುಂದಿಯ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ ಹುಬ್ಬಳ್ಳಿ ಮಾಹಿತಿ ನೀಡಿದ್ದಾರೆ. ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವ್ಯಕ್ತಿಯು ಹೃದಯ ಶಸ್ತ್ರಚಿಕಿತ್ಸೆಗೆಂದು ಡಿಸೆಂಬರ್ 25ರಂದು ವಿಜಯಪುರದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳಿದ್ದರು ಎಂದು ಹೇಳಿದರು.
ಡಿಸೆಂಬರ್ 27ರಂದು ಕೋವಿಡ್ ಟೆಸ್ಟ್ ಮಾಡಿದ್ದು, 28ರಂದು ಸೋಂಕು ದೃಢಪಟ್ಟಿರುವ ಮಾಹಿತಿ ಬಂದಿದೆ. ಸೋಂಕಿತ ವ್ಯಕ್ತಿಯ ಕುಟುಂಬಸ್ಥರ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಅವುಗಳನ್ನು ಪರೀಕ್ಷೆಗಾಗಿ ರವಾನಿಸಲಾಗಿದೆ. ಕುಟುಂಬಸ್ಥರಿಗೂ ಹೋಂ ಐಸೋಲೇಷನ್ ಮಾಡಲಾಗಿದೆ ಎಂದರು.
ಜೆಎನ್ 1 ತಳಿ ತಡೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿ ಜಾಗೃತಿ ಕ್ರಮಗಳ ಕುರಿತಂತೆ ಅಗತ್ಯ ಸೂಚನೆಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈವರೆಗೆ 314 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಯಾವುದೇ ಪಾಸಿಟಿವ್ ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.