ಮುದ್ದೇಬಿಹಾಳ :ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸದೇ ಓಡಾಡುವವರಿಗೆ ಸರ್ಕಾರ ದುಬಾರಿ ದಂಡ ವಿಧಿಸುತ್ತಿದೆ. ಇದನ್ನು ಕಡಿತ ಮಾಡಬೇಕು ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿರುವ ಘಟಕದ ಅಧ್ಯಕ್ಷ ಅಬ್ದುಲ್‌ಮಜೀದ್ ಮಕಾನದಾರ, ಪೊಲೀಸರು ಕೂಡ ಸರ್ಕಾರದ ಆದೇಶ ಪಾಲನೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ದುಬಾರಿ ದಂಡ ವಿಧಿಸುತ್ತಿದ್ದಾರೆ.
ಈ ಹಿಂದೆ ಕೊರೊನಾ ಸಾಂಕ್ರಾಮಿಕ ಆರಂಭದಲ್ಲಿ ಸಾಮಾಜಿಕ ಸಂಘ-ಸಂಸ್ಥೆಗಳು ಪ್ರಮುಖ ರಸ್ತೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಉಚಿತವಾಗಿ ವಿತರಣೆ ಮಾಡುತ್ತಿದ್ದರು. ಇಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಪೂರೈಸಬೇಕೆಂದು ಮನವಿ ಮಾಡಿದರು.
ಮಾಸ್ಕ್ ಹಾಕದೇ ಇರುವವರಿಗೆ ದುಬಾರಿ ದಂಡ ವಿಧಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿದೆ. ಅ.1ರಿಂದ ಜಾರಿಗೆ ಬರುವಂತೆ ಮಾಸ್ಕ್ ಧರಿಸದಿದ್ರೆ ಪಾಲಿಕೆ ವ್ಯಾಪ್ತಿಯಲ್ಲಿ 1,000 ರೂ. ಹಾಗೂ ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ 500 ರೂ. ದಂಡ ವಿಧಿಸಲಾಗುತ್ತಿದೆ.
ಆದರೆ, ದಂಡದ ಪ್ರಮಾಣ ದುಬಾರಿಯಾಗಿದೆ. ಅದರಲ್ಲೂ ಕೂಲಿ ಕಾರ್ಮಿಕರಿಗೆ ಅಂದಿನ ದುಡಿಮೆಯೇ ಅವರಿಗೆ ಜೀವನಾಧಾರವಾಗಿದೆ. ಕೊರೊನಾ ಬಂದಾಗಿನಿಂದ ಉದ್ಯೋಗದ ಅವಕಾಶಗಳು ಕೂಡ ಕಡಿತಗೊಂಡಿವೆ. ಆದ್ದರಿಂದ ದಂಡದ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿ ಗ್ರೇಡ್-2 ತಹಶೀಲ್ದಾರ್ ಡಿ ಜಿ ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.