ಬೆಂಗಳೂರು/ದಾವಣಗೆರೆ/ವಿಜಯಪುರ: ಆರೋಗ್ಯಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿದ್ದರೆ ಮಾತ್ರ ಆತ ಏನನ್ನಾದರೂ ಸಾಧಿಸಬಹುದು, ನೆಮ್ಮದಿಯುತ ಜೀವನ ಮಾಡಬಹುದು. ಆದ್ರೆ ಆಧುನಿಕತೆಯತ್ತ ಸಾಗಿದಂತೆ ಅನಾರೋಗ್ಯ ಸಮಸ್ಯೆಗಳು ಮನುಷ್ಯನನ್ನು ಹೆಚ್ಚಾಗಿ ಕಾಡುತ್ತಿವೆ. ಹೆಚ್ಚಿನ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳು ವೈದ್ಯಕೀಯ ಸಲಕರಣೆಗಳು, ಶಸ್ತ್ರಚಿಕಿತ್ಸೆಗೆ ಬೇಕಾದ ಸೂಕ್ತ ವ್ಯವಸ್ಥೆ ಹೊಂದಿರಬೇಕು.
ರಾಜ್ಯ ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ಸೂಕ್ತ ವ್ಯವಸ್ಥೆಯಿದೆ. ಆದ್ರೆ ಕೊರೊನಾ ಹರಡುವಿಕೆ ಕಾರಣ ಕೆಲ ತಿಂಗಳುಗಳ ಕಾಲ ಶಸ್ತ್ರಚಿಕಿತ್ಸೆ ಮಾಡುತ್ತಿರಲಿಲ್ಲ. ಆದ್ರೀಗ ಸಿಬ್ಬಂದಿ ಕೊರತೆಯಿದ್ದರೂ ಯಾವುದೇ ಶಸ್ತ್ರಚಿಕಿತ್ಸೆ ಮುಂದೂಡುತ್ತಿಲ್ಲ.
ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಕಾರಣ ನಿಲ್ಲಿಸಿದ್ದ ಶಸ್ತ್ರ ಚಿಕಿತ್ಸೆಯನ್ನು ಕಳೆದ ಕೆಲ ದಿನಗಳಿಂದ ಮತ್ತೆ ಆರಂಭಿಸಲಾಗಿದೆ. ಆದ್ರೆ ಶಸ್ತ್ರ ಚಿಕಿತ್ಸೆಗೆ ಬೇಕಾದ ಸೂಕ್ತ ವ್ಯವಸ್ಥೆಯಿದ್ದರೂ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಪದ್ಧತಿ ಮಾತ್ರ ತಪ್ಪಿಲ್ಲ ಎನ್ನುವ ಗಂಭೀರ ಆರೋಪವಿದೆ.