ವಿಜಯಪುರ: ನಾನೇಕೆ ಸಿಎಂ ಆಗಬಾರದು, ನನಗೆ ಎಲ್ಲಾ ಅರ್ಹತೆ ಇದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮಾಡಿ ತೋರಿಸಿಲ್ಲವೇ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಆವರಣದಲ್ಲಿರುವ ಪ್ರತಿಮೆಗೆ ಹೂಮಾಲೆ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಯಾವುದೇ ಭ್ರಷ್ಟಾಚಾರ ಹಗರಣಗಳಲ್ಲಿ ಇಲ್ಲ. ಭ್ರಷ್ಟಾಚಾರ ಮಾಡಿದವರು ಉನ್ನತ ಸ್ಥಾನ ಅಲಂಕರಿಸುತ್ತಿರುವಾಗ, ನಾನೇಕೆ ಸಿಎಂ ಆಗಬಾರದು? ಎಂದು ಪ್ರಶ್ನಿಸಿದರು.
ಸಿಎಂ ಬದಲಾವಣೆ ವಿಚಾರ:
ಸಿಎಂ ಬದಲಾವಣೆ ಕುರಿತು ಪುನರುಚ್ಚರಿಸಿದ ಅವರು, ಏ. 18ರ ಬಳಿಕ ಸ್ಪಷ್ಟ ಮಾಹಿತಿ ನೀಡುತ್ತೇನೆ. ಸದ್ಯ ರಾಜ್ಯದಲ್ಲಿ ಉಪ ಚುನಾವಣೆ ಇರುವ ಕಾರಣ, ನಾನು ನೀಡುವ ಹೇಳಿಕೆಯಿಂದ ಪಕ್ಷಕ್ಕೆ ಹಾನಿ ಉಂಟಾದರೆ, ಕೆಲ ವಿರೋಧಿಗಳು ಇದೇ ವಿಷಯವನ್ನು ಅಸ್ತ್ರವಾಗಿ ಮಾಡಿಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಯ ಗೆಲುವು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಶೆಟ್ಟರ್
ಉಪ ಚುನಾವಣೆಯಲ್ಲಿ ಮುಖಂಡರು ಕರೆಯದೇ ಇದ್ದರೂ ತಾವು ಪಕ್ಷದ ಕಾರ್ಯಕರ್ತನಾಗಿ ಬೆಳಗಾವಿ ಲೋಕಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಬಂದಿದ್ದೇನೆ. ಈಗ ಕೆಲ ಶಾಸಕರು ದೂರವಾಣಿ ಕರೆ ಮಾಡಿ ನೀವು ಪ್ರಚಾರ ಮಾಡಿ ಹೋದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಎಂದಿದ್ದಾರೆ. ಕನಿಷ್ಠ 2 ಲಕ್ಷ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.
ಸಿಡಿ ಲೇಡಿ ಪ್ರಕರಣದಲ್ಲಿ ಯಾರಿದ್ದಾರೆಂದು ಗೊತ್ತಿದೆ:
ಇದೇ ವೇಳೆ ಸಿಡಿ ಹಗರಣದ ಹಿಂದೆ ಯಾರಿದ್ದಾರೆ ಎಂದು ತಮಗೆ ಗೊತ್ತಿದೆ ಎನ್ನುವ ಮೂಲಕ ಯತ್ನಾಳ ಮತ್ತೊಮ್ಮೆ ವಿವಾದಕ್ಕೆ ಮರುಜೀವ ನೀಡಿದರು. ಸದ್ಯ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಈ ಕೃತ್ಯದ ಸೂತ್ರದಾರರು ಯಾರು ಎಂಬುದು ನಮಗೆ ಗೊತ್ತಿದೆ. ಅವರನ್ನು ರಕ್ಷಣೆ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಇದು ದುರ್ದೈವದ ಸಂಗತಿ ಎಂದು ಹೇಳಿದರು.