ವಿಜಯಪುರ : ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಬಬಲೇಶ್ವರ, ತಿಕೋಟಾ, ತಾಳಿಕೋಟೆ, ವಿಜಯಪುರ ತಾಲೂಕುಗಳಲ್ಲಿ ಹರಿದು ಹೋಗುವ ಡೋಣಿ ನದಿ ನೀರು ರೈತರ ಜಮೀನಿಗೆ ನುಗ್ಗಿ ಬೆಳೆ ಕೊಚ್ಚಿ ಹೋಗಿದೆ. ಹೊಲದಲ್ಲಿ ಇದ್ದಲಿ ಭಟ್ಟಿ ತಯಾರಿಸುವ ಹಲವು ಗುಡಿಸಲು ವಾಸಿಗಳು ನಿರಾಶ್ರಿತರಾಗಿದ್ದಾರೆ.
ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ವಿಜಯಪುರ ತಾಲೂಕು, ಬಬಲೇಶ್ವರ, ತಿಕೋಟಾ ಹಾಗೂ ತಾಳಿಕೋಟೆ ಭಾಗದಲ್ಲಿ ಹರಿದು ಹೋಗುವ ಡೋಣಿ ನದಿ ಸ್ವಲ್ಪ ಮಳೆಯಾದರೂ ಸಾಕು ತುಂಬಿ ಹರಿಯುತ್ತದೆ. ನಿನ್ನೆ ರಾತ್ರಿ ಈ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾದ ಕಾರಣ, ನದಿಯಲ್ಲಿ ಭಾರಿ ಹರಿದು ಬಂದಿದ್ದು, ಪರಿಣಾಮ ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಬಬಲೇಶ್ವರ ತಾಲೂಕಿನ ಕಣಮುಚ್ಚನಾಳ ಗ್ರಾಮದ ಹೊಲಗಳಲ್ಲಿ ಇದ್ದಿಲು ತಯಾರಿಸುವ ಭಟ್ಟಿ ಕುಟುಂಬಗಳ ಗುಡಿಸಲಿಗೆ ನೀರು ನುಗ್ಗಿದ ಪರಿಣಾಮ, ರಾತ್ರೋ ರಾತ್ರಿ ಗುಡಿಸಲು ಬಿಟ್ಟು ಓಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಡೋಣಿ ನದಿ ಪ್ರವಾಹಕ್ಕೆ ಬೆಳೆ ಕಳೆದುಕೊಂಡ ರೈತರು ಕಳೆದ ರಾತ್ರಿ ಜಿಲ್ಲೆಯಲ್ಲಿ 17.85 ಮಿ.ಮೀ ಮಳೆಯಾಗಿದೆ. ವಿಜಯಪುರ ತಾಲೂಕು 11.62, ಬಬಲೇಶ್ವರ 11.8, ತಿಕೋಟಾ 17.7, ಬಸವನ ಬಾಗೇವಾಡಿ 15.6, ನಿಡಗುಂದಿ 24.8, ಕೊಲ್ಹಾರ 4.6, ಮುದ್ದೇಬಿಹಾಳ 24.1, ತಾಳಿಕೋಟಿ 34.95, ಇಂಡಿ 17.7, ಚಡಚಣ 14.2, ಸಿಂದಗಿ 9.75 ಹಾಗೂ ದೇವರ ಹಿಪ್ಪರಗಿ ತಾಲೂಕಿನಲ್ಲಿ 27.40 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ 4.85 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪೈಕಿ 3.65 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬೆಳೆಯಲಾಗಿತ್ತು. ಎರಡು ಭಾರಿ ಸುರಿದ ಭಾರಿ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿದೆ. ಇದರ ಜೊತೆಗೆ ಕಡಲೆ, ಗೋದಿ, ಜೋಳ ಹಾಗೂ ತೋಟಗಾರಿಕೆ ಬೆಳೆಯಾಗಿರುವ ದ್ರಾಕ್ಷಿ, ಈರುಳ್ಳಿ, ಕಬ್ಬು ಸಂಪೂರ್ಣ ನೀರು ಪಾಲಾಗಿವೆ. ಮಳೆಯಿಂದ 156 ಮನೆಗಳು ಭಾಗಶಃ ಕುಸಿದಿವೆ, 4 ಮನೆಗಳು ಸಂಪೂರ್ಣ ನಾಶವಾಗಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಪ್ರಮಾಣ ಶೇ. 110 ರಷ್ಟು ಹೆಚ್ಚಾಗಿದೆ. ಈ ಬಾರಿ ಬೆಳೆ ನಷ್ಟವನ್ನು ರೈತರೇ ಖುದ್ದು ಆನ್ ಲೈನ್ ಮೂಲಕ ವಿಡಿಯೋ ಸಮೇತ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಸರ್ಕಾರ ಇದರ ಆಧಾರದ ಮೇಲೆ ಶೀಘ್ರ ಬೆಳೆ ನಷ್ಟದ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಬೇಕಾಗಿದೆ.