ವಿಜಯಪುರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ತಾಳಿಕೋಟೆ ತಾಲೂಕಿನ ಡೋಣಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ವಿಜಯಪುರದಲ್ಲಿ ವರುಣಾರ್ಭಟ: ಉಕ್ಕಿ ಹರಿಯುತ್ತಿದೆ ಡೋಣಿ ನದಿ
ವಿಜಯಪುರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 20.6 ಮಿ.ಮೀಟರ್ ಮಳೆ ದಾಖಲಾಗಿದೆ. ಅತಿ ಹೆಚ್ಚು ಎಂಬಂತೆ ದೇವರಹಿಪ್ಪರಗಿ ತಾಲೂಕಿನಲ್ಲಿ 42.02 ಮಿ.ಮೀಟರ್ ಮಳೆಯಾಗಿದೆ.
ಡೋಣಿ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಆಂಜನೇಯ ದೇವಸ್ಥಾನ ಜಲಾವೃತವಾಗಿದೆ. ಹಡಗಿನಾಳ-ತಾಳಿಕೋಟೆ ರಸ್ತೆ ಸಂಪರ್ಕ ಕಲ್ಪಿಸುವ ಡೋಣಿ ಸೇತುವೆ ಸೇರಿ ಜಿಲ್ಲೆಯ ಹಲವು ಚಿಕ್ಕಪುಟ್ಟ ಸೇತುವೆಗಳು ಮುಳುಗಡೆಯಾಗಿವೆ. ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇನ್ನೂ 24 ಗಂಟೆ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ವಿಜಯಪುರ ತಾಲೂಕಿನಲ್ಲಿ 19.17 ಮಿ.ಮೀಟರ್, ಬಬಲೇಶ್ವರ 19.2, ತಿಕೋಟಾ 20.25, ಬಾಗೇವಾಡಿ 7.28, ನಿಡಗುಂದಿ 8.3, ಕೊಲ್ಹಾರ 7.0, ಮುದ್ದೇಬಿಹಾಳ 5.2, ತಾಳಿಕೋಟೆ 4.45, ಇಂಡಿ 33.18, ಚಡಚಣ 29.05, ಸಿಂದಗಿ 45.02 ಹಾಗೂ ದೇವರ ಹಿಪ್ಪರಗಿ ತಾಲೂಕಿನಲ್ಲಿ ದಾಖಲೆಯ 42.02 ಮಿಲಿ ಮೀಟರ್ ಮಳೆಯಾಗಿದೆ. ವಿವಿಧ ಗ್ರಾಮಗಳಲ್ಲಿ 500ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ನಗರ ಪ್ರದೇಶ ಸೇರಿದಂತೆ ಪಟ್ಟಣ ಪ್ರದೇಶಗಳ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ನಿರಂತರ ಮಳೆಯಿಂದ ಜನ ಮನೆಯಿಂದ ಹೊರ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.