ವಿಜಯಪುರ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಆಲಿಂಗನ ಮಾಡಿದ್ದನ್ನು ಸಚಿವ ಮುನಿರತ್ನ 'ಇದು ಅನೈತಿಕ ಆಲಿಂಗನ' ಎಂದು ವ್ಯಂಗವಾಡಿರುವುದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಚುನಾವಣಾ ಪ್ರಚಾರದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ, ಯಾರು ಅಕ್ರಮ ಚಟುವಟಿಕೆ ಮಾಡುತ್ತಾರೋ ಅವರಿಗೆ ಅಕ್ರಮವಾಗಿಯೇ ಕಾಣುತ್ತದೆ ಎಂದು ತಿರುಗೇಟು ಕೊಟ್ಟರು.
ವಿಜಯಪುರದಲ್ಲಿ ಮಾತನಾಡಿದ ಅವರು, ಜನ್ಮದಿನದಂದು ಕಡುವೈರಿಯೇ ಇರಲಿ ಮತ್ತೊಂದೇ ಇರಲಿ ಶುಭಾಶಯ ಕೋರುವುದು ಉತ್ತಮರ ಲಕ್ಷಣ. ಸಿದ್ದರಾಮಯ್ಯ ಅವರಿಗೆ ಈಶ್ವರಪ್ಪ ನೂರು ವರ್ಷ ಬಾಳಲಿ ಎಂದು ವಿಶ್ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ವೈರಿಯಲ್ಲ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅಷ್ಟೇ. ಜನರಿಗೆ ಒಗ್ಗಟ್ಟಿನ ಸಂದೇಶ ಕೊಡಿ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದರು.
ಮಾಜಿ ಸಚಿವ ಎಂ ಬಿ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಇತ್ತು, ಹಾಗಾಗಿ ನಾವು ಆಚರಣೆ ಮಾಡಿದೆವು. ಬಿಜೆಪಿಯವರು ಏನಂಥ ಆಚರಣೆ ಮಾಡುತ್ತಾರೆ. ಏನಂಥ ಪರ್ಯಾಯ ಸಮಾವೇಶ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ರಾಜ್ಯದ ಇತಿಹಾಸದಲ್ಲಿ ಇಷ್ಟು ಜನ ಸೇರಿರಲಿಲ್ಲ, ಮುಂದೆಯೂ ಸೇರಲ್ಲ. ಬೇಕಾದರೆ ಸಮಾವೇಶ ಮಾಡಿ ನೋಡಲಿ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಂಬಿಪಿ, ಈ ಕುರಿತು ಯಾರೂ ಮಾತನಾಡದಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಚುನಾವಣೆಯಲ್ಲಿ ಮೊದಲು ನಾವು ಹೆಚ್ಚಿನ ಸಂಖ್ಯೆಗಳನ್ನು ಪಡೆಯಬೇಕು. 115, 125, 130, 140 ಸೀಟ್ಗಳು ಬರಬೇಕು. ಹೆಚ್ಚಿನ ಸ್ಥಾನಗಳು ಬಂದ ಬಳಿಕ ಶಾಸಕಾಂಗ ಸಭೆ ಕರೆಯಲಾಗುತ್ತದೆ. ಆಗ ಶಾಸಕರ ಅಭಿಪ್ರಾಯ ಪಡೆದು, ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ, ಕಾಂಗ್ರೆಸ್ ಆಧ್ಯಕ್ಷರು ಯಾರು ಸಿಎಂ ಆಗಬೇಕೆಂದು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ :ಸಿದ್ದರಾಮೋತ್ಸವಕ್ಕೆ ಬಿಜೆಪಿ ಕೇಂದ್ರ ನಾಯಕರು ತಕ್ಕ ಉತ್ತರ ನೀಡಲಿದ್ದಾರೆ: ಯತ್ನಾಳ್