ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಭೀತಿ ಎಲ್ಲರ ನಿದ್ದೆಗೆಡಿಸಿತ್ತು. ಜಿಲ್ಲೆಯಲ್ಲಿ ಮೊದಲಿಗೆ ವೃದ್ಧೆಯೊಬ್ಬರಿಗೆ ಅಂಟಿದ ಸೋಂಕಿನಿಂದ ಇಡೀ ಜಿಲ್ಲೆ ಆತಂಕದಲ್ಲಿ ಮುಳುಗಿತ್ತು. ಸದ್ಯ 60 ವರ್ಷದ ವೃದ್ಧೆ ಚಿಕಿತ್ಸೆಯ ಬಳಿಕ ಮನೆ ಸೇರಿದ್ದಾರೆ. ಇದೀಗ ವೃದ್ಧೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಆ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ವೃದ್ಧೆಯು ಇಲ್ಲಿನ ಚಪ್ಪರ್ ಬಂದ್ ಕಾಲೋನಿಯ ನಿವಾಸಿಯಾಗಿದ್ದರು. ಇವರ 69 ವರ್ಷದ ಪತಿ ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಸೋಂಕು ದೃಢಪಟ್ಟಿತ್ತು.
ವಿಜಯಪುರದಲ್ಲಿ ಕೊರೊನಾ ಸೋಂಕಿತ ವೃದ್ಧೆ ಗುಣಮುಖ: ಸಂತಸ ಹಂಚಿಕೊಂಡ ವೈದ್ಯರು ಅಲ್ಲದೆ 60 ವರ್ಷದ ವೃದ್ಧೆಗೆ 2 ಬಾರಿ ಪಾರ್ಶ್ವವಾಯು ಬಡಿದಿತ್ತು. ಎರಡು ಬಾರಿ ಲಘು ಹೃದಯಾಘಾತವಾಗಿತ್ತು. ಅಂದಿನಿಂದಲೇ ಐಸಿಯುವಿನಲ್ಲಿ ಜಿಲ್ಲೆಯ ನುರಿತ ವೈದ್ಯರು ಚಿಕಿತ್ಸೆ ಆರಂಭಿಸಿದ್ದರು. ಈ ಮಧ್ಯೆ ಸೊಂಕು ತಗುಲಿದ್ದ ಆಕೆಯ ಪತಿ ಸಾವನ್ನಪ್ಪಿದ್ದರು.
ಕೊರೊನಾ ಸೋಂಕು ಹಿನ್ನೆಲೆ ವೃದ್ಧೆಗೆ ಚಿಕಿತ್ಸೆ ನೀಡುವಾಗ ವೃದ್ಧೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು, ವೈದ್ಯರಲ್ಲಿ ಇನ್ನಷ್ಟು ಶಕ್ತಿ ತುಂಬಿತ್ತು. ಅಲ್ಲದೆ ಆಕೆಯ ಗುಣಮುಖದಿಂದಾಗಿ ಜಿಲ್ಲಾಡಳಿತಕ್ಕೆ ಹೊಸ ಚೈತನ್ಯ ಬಂದಂತಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 41 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಾಗಿದೆ. ಎಲ್ಲರನ್ನು ಗುಣಮುಖರನ್ನಾಗಿ ಮಾಡುವ ಉತ್ಸಾಹ ವೈದ್ಯಕೀಯ ಸಿಬ್ಬಂದಿಯಲ್ಲಿ ಮೂಡಿದೆ.