ವಿಜಯಪುರ:ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಗೊಳಿಸಿರುವ ಲಾಕ್ಡೌನ್ ಉಲ್ಲಂಘಿಸಿದ ಮೂವರು ಮಸೀದಿ ಮುಖ್ಯಸ್ಥರು ಸೇರಿ 10 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಲಾಕ್ಡೌನ್ ಆದೇಶ ಉಲ್ಲಂಘಿಸಿದ 10 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ
ಲಾಕ್ಡೌನ್ ಉಲ್ಲಂಘಿಸಿದ ಮೂವರು ಮಸೀದಿ ಮುಖ್ಯಸ್ಥರು ಸೇರಿ 10 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮಸೀದಿಗಳಿವೆ. ಇಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಎಂದು ಈಗಾಗಲೇ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ ಉಲ್ಲಂಘಿಸಿದ ಮೂವರು ಮಸೀದಿ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಇದರ ಜತೆ ಕೆಲ ಅನಧಿಕೃತ ಸುದ್ದಿ ವಾಹಿನಿಗಳು ಲಾಕ್ಡೌನ್ ವಿರುದ್ಧ, ಕೊರೊನಾ ವೈರಸ್ ತಗಲಿರುವ ಕುರಿತು ಅಪಪ್ರಚಾರ ಹಾಗೂ ನಿಯಮ ಉಲ್ಲಂಘಿಸಿದ ಸವಾರರು ಸೇರಿ 10 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದರು. ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 100ಕ್ಕೂ ಹೆಚ್ಚು ಜನರ ಗುರುತು ಪತ್ತೆ ಹಚ್ಚಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ. ಇವರಲ್ಲಿ 19 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೂ ಅವರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಇಲ್ಲಿಯವರೆಗೆ 370 ಜನ ವಿದೇಶದಿಂದ ವಿಜಯಪುರಕ್ಕೆ ಆಗಮಿಸಿದ್ದಾರೆ. ಅವರಲ್ಲಿ 27 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿ ನೆಗೆಟಿವ್ ಬಂದಿವೆ. ಈಗಾಗಲೇ 93 ಜನ 28 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ. 244 ಜನ ಹೋಮ್ ಕ್ವಾರಂಟೈನ್ ಅವಧಿಯಲ್ಲಿದ್ದಾರೆ. 23 ಜನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಉಳಿದ 23 ಜನರ ವರದಿಗಾಗಿ ಕಾಯಲಾಗುತ್ತಿದೆ ಎಂದರು.