ವಿಜಯಪುರ: ವಿದ್ಯುತ್ ತಂತಿ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಗ್ರಾಮದ 6 ಜನ ಆರೋಪಿಗಳಿಗೆ ಉಚ್ಚ ನ್ಯಾಯಾಲಯ 3,68,220 ರೂ.ಗಳ ದಂಡ ವಿಧಿಸಿ ಆದೇಶಿಸಿದೆ.
ವಿದ್ಯುತ್ ತಂತಿ ಕಳ್ಳತನ ಮಾಡಿದ್ದ ಖದೀಮರಿಗೆ ದಂಡ ವಿಧಿಸಿದ ಕೋರ್ಟ್ ಬಿಜ್ಜೂರ ಗ್ರಾಮದ ಬಸಲಿಂಗಪ್ಪ ಭೀಮಪ್ಪ ಕಮರಿ ಹಾಗೂ ಏಳು ಜನ ಇತರ ಆರೋಪಿಗಳ ಮೇಲೆ 2008ರಲ್ಲಿ ವಿದ್ಯುತ್ ತಂತಿ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಜಯಪುರದ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ 2012ರಲ್ಲಿ ರಂದು 3,68,220 ರೂ.ಗಳ ದಂಡ ಹಾಗೂ ಅದಕ್ಕೆ ತಪ್ಪಿದಲ್ಲಿ ಒಂದು ವರ್ಷ ಜೈಲುವಾಸದ ಆದೇಶ ಹೊರಡಿಸಿತ್ತು.
ದಂಡಕ್ಕೆ ಗುರಿಯಾಗಿದ್ದ ಆರೋಪಿಗಳು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ವಿಜಯಪುರದ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ ಎತ್ತಿ ಹಿಡಿದು 2020 ಸೆ.30ರೊಳಗಾಗಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಆದೇಶಿಸಿತ್ತು.
ಈ ಆದೇಶದಂತೆ ಸೆ.24ರಂದು ಹುಬ್ಬಳಿ ಜಾಗೃತದಳದ ಅಧಿಕಾರಿಗಳು ಆರೋಪಿಗಳ ಪೈಕಿ ಇಬ್ಬರು ಮೃತಪಟ್ಟಿರುವ ಕಾರಣ ಉಳಿದ 6 ಜನ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳಿಂದ 3,68,220 ರೂ.ಗಳನ್ನು ನ್ಯಾಯಾಲಯ ಕಟ್ಟಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.