ವಿಜಯಪುರ: ಮಹಾಮಾರಿ ಕೊರೊನಾ ಪ್ರತಿಯೊಬ್ಬರಲ್ಲೂ ಭಯದ ವಾತಾವರಣ ಸೃಷ್ಟಿಸಿತ್ತು. ಕೋವಿಡ್ ರೋಗಿಗಳನ್ನು ಹತ್ತಿರದಿಂದ ನೋಡುವುದು ಹೋಗಲಿ, ಅವರಿಗೆ ಚಿಕಿತ್ಸೆ ನೀಡಲು ವೈದ್ಯ ಲೋಕ ಭಯ ಪಟ್ಟಿತ್ತು. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಕೋವಿಡ್ ರೋಗಿಗಳ ಆರೈಕೆಗೆ ಹೆಗಲು ಕೊಟ್ಟವರು ಶುಶ್ರೂಷಕಿ/ಶುಶ್ರೂಷಕರು. ಕೊರೊನಾ ವೇಳೆ ಅವರು ಕಾರ್ಯನಿರ್ವಹಿಸಿದ ಅನುಭವದ ಬಗ್ಗೆ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಶುಶ್ರೂಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶರಣಬಸಪ್ಪ ಹಿಪ್ಪರಗಿ ಕೋವಿಡ್ 19 ರೋಗದಿಂದ ಬಳಲುತ್ತಿದ್ದ ತನ್ನ ತಂದೆಯನ್ಹು ತಾನು ಶುಶ್ರೂಷಕರಾಗಿ ಆಗಿ ಕೆಲಸ ಮಾಡುತ್ತಿದ್ದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದನು. ಬೇರೆ ರೋಗಿಗಳ ಜತೆ ತನ್ನ ತಂದೆಗೂ ಚಿಕಿತ್ಸೆ ನೀಡುತ್ತಿದ್ದನು. ಆದರೆ, ವಿಧಿಯಾಟ ಅದೇ ಮಹಾಮಾರಿ ರೋಗಕ್ಕೆ ಅವರ ತಂದೆ ಬಲಿಯಾಗಬೇಕಾಯಿತು. ಇಷ್ಟಕ್ಕೆ ಆತ್ಮಸೈರ್ಯ ಕಳೆದುಕೊಳ್ಳದ ಆ ಶುಶ್ರೂಷಕ ತಂದೆಯ ಕ್ರಿಯಾಕ್ರಮ ಮುಗಿಸಿ ವಾಪಸ್ ಕರ್ತವ್ಯಕ್ಕೆ ಹಾಜರಾಗಿ ನೂರಾರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಿ ಅವರಲ್ಲಿ ತಮ್ಮ ತಂದೆಯನ್ನು ಕಂಡರು.