ವಿಜಯಪುರ: ನಗರದ ಮನಗೂಳಿ ರಸ್ತೆಯ ಜಲನಗರದ ಪೊಲೀಸ್ ಕಾನ್ಸ್ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ಜಲನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 46 ವರ್ಷದ ಪೊಲೀಸ್ ಕಾನ್ಸಟೆಬಲ್ ಈಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಕಳೆದ ಮೂರು ತಿಂಗಳಿಂದ ಕಂಟೈನ್ಮೆಂಟ್ ಪ್ರದೇಶವಾಗಿರುವ ಚಪ್ಪರಬಂದ್ ಕಾಲೊನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಪ್ರದೇಶದಿಂದ ಜಿಲ್ಲೆಯಲ್ಲಿ ಮೊದಲು ಸೋಂಕು ಪತ್ತೆಯಾಗಿತ್ತು.
ಪೊಲೀಸ್ ಕಾನ್ಸಟೆಬಲ್ಗೂ ತಗುಲಿದ ಕೊರೊನಾ ಸೋಂಕು ಕೊರೊನಾ ವೈರಸ್ ಬೇರೆ ಪೊಲೀಸರಿಗೆ ಹರಡದಂತೆ ಮುನ್ನೆಚ್ಚರಿಕೆಯಾಗಿ ಠಾಣೆಯನ್ನು ಸ್ಯಾನಿಟೈಸರ್ನಿಂದ ಶುಚಿಗೊಳಿಸಲಾಗಿದೆ. ಪಕ್ಕದ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಆದರೂ ಸಾರ್ವಜನಿಕರು ಪೊಲೀಸ್ ಠಾಣೆಗೆ ಹೋಗಲು ಹೆದರುವಂತಾಗಿದೆ.
ಪೊಲೀಸ್ ಕಾನ್ಸ್ಟೆಬಲ್ಗೆ ಕೊರೊನಾ ಸೋಂಕು ತಗುಲಿದ ಕಾರಣ ಪೊಲೀಸ್ ಠಾಣೆಯಲ್ಲಿದ್ದ 37 ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅವರ ಜೊತೆ ಕಾನ್ಸಟೆಬಲ್ ಪತ್ನಿ, ಮಕ್ಕಳು ಹಾಗೂ ಅವರ ಸಂಪರ್ಕದಲ್ಲಿರುವವರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ.
ಇತ್ತೀಚೆಗೆ ರಾಜ್ಯದ ಎಲ್ಲಾ ಪೊಲೀಸರು, ಉನ್ನತ ಅಧಿಕಾರಿಗಳ ಗಂಟಲು ದ್ರವ ಪರೀಕ್ಷೆ ನಡೆಸಬೇಕು ಎನ್ನುವ ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ 8 ಪೊಲೀಸ್ ಠಾಣೆಗಳ 250ಕ್ಕೂ ಸಿಬ್ಬಂದಿಗೆ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ಒಬ್ಬ ಪೊಲೀಸ್ ಕಾನ್ಸ್ಟೆಬಲ್ಗೆ ಸೋಂಕು ತಗುಲಿದೆ. 100ಕ್ಕೂ ಹೆಚ್ಚು ಸಿಬ್ಬಂದಿಯ ಪರೀಕ್ಷಾ ವರದಿ ಬರಲಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ.