ಮುದ್ದೇಬಿಹಾಳ: ಕೊರೊನಾ ಹೆಚ್ಚಳದಿಂದಾಗಿ ಸರ್ಕಾರ ಹೊರಡಿಸಿರುವ ಕಟ್ಟುನಿಟ್ಟಿನ ಕ್ರಮ ಕೇವಲ ನಾಮಕೇವಾಸ್ತೆ ಎಂಬಂತೆ ಮಂಗಳವಾರ ಪಟ್ಟಣದಲ್ಲಿ ಕಂಡು ಬಂದಿತು.
ಪಟ್ಟಣದಲ್ಲಿ ಅಗತ್ಯವಸ್ತುಗಳನ್ನು ಹೊರತುಪಡಿಸಿ ಬೇರೆ ಅಂಗಡಿಗಳು ತೆಗೆಯಬಾರದು ಎಂದು ಸರ್ಕಾರ ಹೇಳಿದ್ದರೂ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ. ಅಂಬೇಡ್ಕರ್ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್, ಮುಖ್ಯರಸ್ತೆಯಲ್ಲಿ ಬರುವ ಕಿರಾಣಿ, ತರಕಾರಿ ಹಣ್ಣು ಮೊದಲಾದ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ಹೊರತುಪಡಿಸಿದರೆ ಬೇರೆ ಅಂಗಡಿಗಳೂ ತೆರೆದು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಪಟ್ಟಣದ ಮುಖ್ಯರಸ್ತೆಯಲ್ಲಿ ಹಳೇ ಕೋರ್ಟ್ ಸಮೀಪದಲ್ಲಿ ಬರುವ ಭೈರವ ಟೆಕ್ಸ್ಟೈಲ್ಸ್ ಅಂಗಡಿಯೊಳಗೆ ಅಂದಾಜು 50 - 60 ಜನ ಮದುವೆ ಸಂತೆಗೆ ಎಂದು ಗುಂಪುಗೂಡಿ ಬಟ್ಟೆ ಖರೀದಿ ಮಾಡುತ್ತಿದ್ದರು.
ಅಚ್ಚರಿ ಎಂದರೆ ಕಪ್ಪಡಾ ಮರ್ಚಂಟ್ ಅಸೋಷಿಯೇಷನ್ ಪದಾಧಿಕಾರಿಗೆ ಸೇರಿದ ಈ ಅಂಗಡಿಯಲ್ಲಿಯೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಾರ ಮಾಡಲಾಯಿತು. ವಿಷಯ ತಿಳಿದ ಪೊಲೀಸರು ಅಂಗಡಿಗೆ ಆಗಮಿಸಿ ಒಳಗೆ ವ್ಯಾಪಾರಕ್ಕೆ ಇಳಿದಿದ್ದವರನ್ನು ಹೊರಕಳುಹಿಸಲು ಹರಸಾಹಸ ಪಡಬೇಕಾಯಿತು. ಒಳಗಿದ್ದ ಹಲವರು ಮಾಸ್ಕ್ ಕೂಡಾ ಹಾಕಿರಲಿಲ್ಲ.
ಇನ್ನುಳಿದಂತೆ ಬಟ್ಟೆ, ಪಾತ್ರೆ, ಸ್ಟೇಷನರಿ, ಪುಸ್ತಕ, ಗಿಫ್ಟ್ ಸೆಂಟರ್ ಸೇರಿದಂತೆ ಮೊದಲಾದ ಅಂಗಡಿಗಳೂ ಚಾಲನೆಯಲ್ಲಿದ್ದವು. ಪೊಲೀಸರಾಗಲೀ, ಪುರಸಭೆ ಅಧಿಕಾರಿಗಳಾಗಲೀ ಇವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೇ ದಂಡ ಹಾಕುವ ಗೋಜಿಗೂ ಹೋಗಲಿಲ್ಲ.