ವಿಜಯಪುರ:ಕಳೆದ 25 ವರ್ಷಗಳಿಂದ ನಿಂಬೆಹಣ್ಣು ಬೆಳೆ ಬೆಳೆಯುತ್ತಾ ಬದುಕು ಕಟ್ಟಿಕೊಂಡಿದ್ದ ರೈತ ಲಾಕ್‌ಡೌನ್‌ನಿಂದ ಮಾರುಕಟ್ಟೆಗೆ ಹೋಗಲಾಗದೆ ನಷ್ಟದಲ್ಲಿದ್ದ. ಸರ್ಕಾರವೇನೋ ಲಾಕ್‌ಡೌನ್ ತೆರವುಗೊಳಿಸಿತು. ಹೊಲದಲ್ಲಿರುವ ನಿಂಬೆಹಣ್ಣುಗಳನ್ನು ಮಾರಾಟ ಮಾಡಿ ಕೈತುಂಬ ರೊಕ್ಕ ಸಂಗ್ರಹಿಸಿ ಜೀವನ ನಡೆಸಬಹುದು ಅಂದುಕೊಂಡಾಗ ನಿಂಬೆಹಣ್ಣಿಗೆ ಸರಿಯಾಗಿ ಬೆಲೆ ಸಿಗದೆ ಹೊಲದಲ್ಲೇ ಬಿದ್ದು ಕೊಳೆಯುವಂತಾಗಿದೆ.
ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ರೈತ ಸಾಹೇಬ ಗೌಡ ಬಿರಾದಾರ ಅವರ ಜೀವನವನ್ನು ಕೊರೊನಾ ಸಂಕಷ್ಟದಲ್ಲಿ ಸಿಲುಕಿಸಿದೆ. ಪ್ರತಿವರ್ಷ ಬೇಸಿಗೆಯಲ್ಲಿ ನಿಂಬೆ ಮಾರಾಟದಿಂದ ಭರ್ಜರಿ ಆದಾಯ ಬರ್ತಿತ್ತು. ಆದ್ರೆ ಕೊರೊನಾ, ಲಾಕ್‌ಡೌನ್‌ಗಳಿಂದಾಗಿ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿತೆಂದು ನಿಂಬೆಹಣ್ಣುಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದ್ರೆ ಮೂಟೆಗೆ 100 ರೂ.ಗಳಿಗೆ ಕೇಳುತ್ತಿದ್ದಾರೆ. ಇದ್ರಿಂದ ರೈತನ ನಿರೀಕ್ಷೆಗಳು ಹುಸಿಯಾಗಿವೆ. ಇತ್ತ ಬೇರೆ ಜಿಲ್ಲೆಗಳ ಮಾರುಕಟ್ಟೆಗಳಿಗೆ ಹೋಗಬೇಕೆಂದ್ರೂ ಬಂದ ಆದಾಯ ಸಾರಿಗೆ ವೆಚ್ಚಕ್ಕೂ ಸರಿದೂಗದು ಎಂದು ರೈತ ಗಿಡಳಿಂದ ಬೆಳೆ ತೆಗೆಯದೆ ಹಾಗೇ ಉದುರಿ ಕೊಳೆತು ಹೋಗಲು ಬಿಟ್ಟಿದ್ದಾನೆ.