ವಿಜಯಪುರ:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಹಲವು ನಿಯಮಗಳನ್ನು ಘೋಷಿಸಿದೆ. ಅದರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವುದರ ಕುರಿತಂತೆ ರಾಜ್ಯದೆಲ್ಲಡೆ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರದ ಕುರಿತು ಸ್ವಾಮೀಜಿಗಳು ಸಭೆ ನಡೆಸಿದ್ದು, ಈ ಸಭೆಯ ವಿಚಾರವಾಗಿ ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ್ ಗಣಿಹಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಟಿ ನಡೆಸಿದ ಗಣಿಹಾರ್ ಒಬ್ಬ ಸ್ವಾಮೀಜಿಗಳಾದರೂ ಗೋವು ಸಾಕಿದ್ದೀರಾ? ಸೆಗಣಿ, ಉಚ್ಚೆ(ಮೂತ್ರ) ತೆಗೆದಿದ್ದಾರಾ? ಅಂತ ಪ್ರಶ್ನಿಸುವ ಮೂಲಕ ವಿವಾದ ಮೈಮೇಲೆ ಕಳೆದುಕೊಂಡಿದ್ದಾರೆ. 20 ಸ್ವಾಮೀಜಿಗಳು ವಿಶ್ವ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದವರನ್ನು ಅಕ್ಕಪಕ್ಕ ಕೂರಿಸಿಕೊಂಡು ಸಭೆ ಮಾಡಿದರು.
ಆರ್ ಎಸ್ ಎಸ್, ಬಿಜೆಪಿಯ ಪುಂಗಿ ಬಾರಿಸಲಿಕ್ಕೆ ಸ್ವಾಮೀಜಿಗಳು ಕುಳಿತುಕೊಂಡಿದ್ದಾರೆ. ಭಾರತ ದೇಶದಲ್ಲಿ ಖಾವಿ ತೊಟ್ಟವರ ಬಗ್ಗೆ ಇರುವ ಪವಿತ್ರ ಭಾವನೆ ಯಾರಿಗೂ ಇಲ್ಲ. ಆದರೆ ಖಾವಿ ತೊಟ್ಟುಕೊಂಡು ಸ್ವಾಮೀಜಿಗಳು ರಾಜಕಾರಣ ಮಾಡುತ್ತಿದ್ದಾರೆ. ಅರಿಷಡ್ವರ್ಗಗಳ ಬಿಟ್ಟವ ಸನ್ಯಾಸಿ ಆಗುತ್ತಾರೆ, ಆಗ ಅವರಿಗೆ ಖಾವಿ ಪಟ್ಟ ಬರುತ್ತದೆ. ಅದನ್ನು ಹಾಕಿಕೊಳ್ಳಲು ಶಕ್ತಿ ಬರುತ್ತದೆ. ಆದರೆ ಎಲ್ಲಾ ಕಲ್ಮಶ, ವಿಷದ ಭಾವನೆ ಇಟ್ಟುಕೊಂಡು ನೀವು ಸನ್ಯಾಸಿ ಆಗುತ್ತೀರಾ ಎಂದು ಎಸ್ ಎಂ ಪಾಟೀಲ್ ಗಣಿಹಾರ ಸ್ವಾಮೀಜಿಗಳ ವಿರುದ್ಧ ಹರಿಹಾಯ್ದಿದ್ದಾರೆ.