ವಿಜಯಪುರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಕ್ರಾಂತಿಕಾರಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು. ಬಿಜೆಪಿ ತನ್ನ ಈ ಹಿಂದಿನ ಪ್ರಣಾಳಿಕೆ ಅನುಷ್ಠಾನಕ್ಕೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಪ್ರಣಾಳಿಕೆ ಅಂಶಗಳನ್ನ ಬಹುತೇಕ ಪೂರ್ಣಗೊಳಿಸಿದೆ ಎಂದರು. ಅದರಂತೆ ಅನ್ಯರಾಜ್ಯದಲ್ಲಿ ಅಧಿಕಾರದಲ್ಲಿರುವೆಡೆ ಪ್ರಣಾಳಿಕೆ ಅಂಶಗಳನ್ನ ಪೂರ್ಣಗೊಳಿಸಿದೆ. ನೆಹರೂರವರ ನೇತೃತ್ವದಲ್ಲಿ ಪಂಚವಾರ್ಷಿಕ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ. ಅದರಂತೆ ಶಾಸ್ತ್ರಿಜಿ, ರಾಜೀವಗಾಂಧಿ, ನರಸಿಂಹರಾವ್, ಮನಮೋಹನ್ ಸಿಂಗ್ ನೇತೃತ್ವದಲ್ಲಿ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದರು.
ಈ ಬಾರಿ ಪ್ರತಿ ಕುಟುಂಬಕ್ಕೆ ಮಾಸಿಕ 6 ಸಾವಿರ, ವಾರ್ಷಿಕ 72 ಸಾವಿರ ಕೊಡುವ ಯೋಜನೆ ಬಡತನ ನಿರ್ಮೂಲನೆಗೆ ಪರಿಣಾಮಕಾರಿ ಕೆಲಸ ಮಾಡಲಿದೆ. ಇದರಿಂದ 25 ಕೋಟಿ ಬಡತನ ರೇಖೆಗಿಂತ ಕೆಳಗಿಳುವ ಜನತೆಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದರು. ಕೃಷಿಕರ ಪೂರಕವಾದ ಪ್ರಣಾಳಿಕೆ ನಮ್ಮದಾಗಿದೆ. ರೈತ ಸಾಲಮುಕ್ತಿ ಹೊಂದಬೇಕು ಎನ್ನುವುದು ನಮ್ಮ ಗುರಿ. ಜಿಡಿಪಿ'ಯ 3% ಆರೋಗ್ಯಕ್ಕೆ ವಿನಿಯೋಗ ನಮ್ಮ ಧ್ಯೆಯ ಎಂದರು.
ಜಿಎಸ್ಟಿ ಮೊದಲು ಪ್ರಸ್ತಾಪಿಸಿದ್ದು ನಾವು, ಮೊದಲು ಅದನ್ನ ಬಿಜೆಪಿ ವಿರೋಧಿಸಿತ್ತು, ಸಮತೋಲಿತ ಜಿಎಸ್ಟಿ ನಮ್ಮ ವಾಗ್ದಾನ. ಮಹಿಳಾ ಮೀಸಲಾತಿ, ಲಿಂಗನ್ಯಾಯ ನಮ್ಮ ಆಶಯ. ಮಹಿಳೆಯರಿಗೆ 33% ಮೀಸಲಾತಿ ಕೊಡ್ತೇವೆ. ಲೋಕಸಭೆಯಿಂದ ಹಿಡಿದು ಪಂಚಾಯತಿ ವ್ಯಾಪ್ತಿ ವರೆಗೆ ಮಹಿಳಾ ಮೀಸಲಾತಿ ನಮ್ಮ ವಾಗ್ದಾನವಾಗಿದೆ ಎಂದರು. ಧರ್ಮ ದ್ವೇಷ ಉಂಟುಮಾಡುವ ವಾತಾವರಣ ದೇಶದಲ್ಲಿದೆ, ಇದೊಂದು ಅಪರಾಧಿಕ ಕೃತ್ಯ, ಇದನ್ನ ನಾವು ಹೋಗಲಾಡಿಸುತ್ತೇವೆ. ತನಿಖಾ ಸಂಸ್ಥೆಗಳ ದುರುಪಯೋಗ ತಡೆಗಟ್ಟುತ್ತೇವೆ. ಇದು ಸಂವಿದಾನಿಕ ಅಪರಾಧ ಇದನ್ನ ತಡೆಗಟ್ಟಬೇಕು ಎಂದರು.