ವಿಜಯಪುರ :ಬಸವಜಯಂತಿ ಹಿನ್ನೆಲೆ ನಾಳೆ (ಆದಿತ್ಯವಾರ) ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 7.20ಕ್ಕೆ ದೆಹಲಿ ಏರ್ ಪೋರ್ಟ್ ನಿಂದ ಪ್ರಯಾಣ ಬೆಳೆಸಲಿದ್ದು, ಬೆಳಿಗ್ಗೆ 10 ಗಂಟೆಗೆ ಹೈದರಾಬಾದ್ ತಲುಪಲಿದ್ದಾರೆ. ಬಳಿಕ ಅಲ್ಲಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ 10.50 ಕ್ಕೆ ಪ್ರಯಾಣ ಬೆಳೆಸಿ 11.40 ಕ್ಕೆ ಬಾಗಲಕೋಟೆಯ ಕೂಡಲ ಸಂಗಮ ಕ್ಷೇತ್ರ ತಲುಪಲಿದ್ದಾರೆ. 11.50 ರಿಂದ 12.10 ರವರೆಗೆ ಕೂಡಲಸಂಗಮ ದೇವಸ್ಥಾನ ಹಾಗೂ ಬಸವಣ್ಣನವರ ಐಕ್ಯ ಮಂಟಪ ದರ್ಶನ ಮಾಡಲಿದ್ದಾರೆ. 12. 15 ರಿಂದ 1.30 ರವರೆಗೆ ಕೂಡಲಸಂಗಮದ ಬಸವ ಮಂಟಪದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
1.40 ರಿಂದ 2.10 ಕೂಡಲಸಂಗಮದಲ್ಲಿನ ದಾಸೋಹ ಭವನದಲ್ಲಿ ಪ್ರಸಾದ ಸೇವನೆ ಮಾಡಿದ ನಂತರ 2.15ರಿಂದ 4.15 ರವರೆಗೆ ಕೂಡಲಸಂಗಮದಲ್ಲಿನ ಯಾತ್ರಿ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ನಂತರ 4.25 ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರದತ್ತ ಪ್ರಯಾಣ ಬೆಳೆಸಲಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಹಾಗೂ ರೋಡ ಶೋ ನಡೆಸಲಿದ್ದಾರೆ. ನಗರದ ಶಿವಾಜಿ ಚೌಕ್ ನಿಂದ ಕನಕದಾಸ ವೃತ್ತದವರೆಗೂ ರೋಡ್ ಶೋ ನಡೆಯಲಿದ್ದು, ರೋಡ್ ಶೋದಲ್ಲಿ ರಾಹುಲ್ ಗಾಂಧಿ ಜತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭಾಗವಹಿಸಲಿದ್ದಾರೆ. ಬಳಿಕ ಅಂದು ರಾತ್ರಿ ವಿಜಯಪುರದಲ್ಲಿ ವಾಸ್ತವ್ಯ ಹೂಡಿ ಮರುದಿನ ವಾಪಸ್ ದೆಹಲಿಗೆ ಪ್ರಯಾಣಿಸಲಿದ್ದಾರೆ.