ವಿಜಯಪುರ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಜತೆ ಲೋಕಸಭಾ ಚುನಾವಣೆ ರಂಗೇರಿದೆ. ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ರಮೇಶ ಜಿಗಜಿಣಗಿ ಮತ್ತೊಮ್ಮೆ ಕಣಕ್ಕೆ ಇಳಿದಿದ್ದಾರೆ. ಆದರೆ, ಅವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಲು ಮೈತ್ರಿ ಸರ್ಕಾರದ ಅಭ್ಯರ್ಥಿ ಹುಡುಕಾಟ ಇನ್ನೂ ನಡೆದಿದೆ. ವಿಜಯಪುರ ಲೋಕಸಭೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಾರಣ ದಲಿತ ಅಭ್ಯರ್ಥಿ ಹುಡುಕಾಟ ಕಷ್ಟಕರವಾಗಿದೆ.
ಈಗಾಗಲೇ ದೋಸ್ತಿ ಸರ್ಕಾರದಲ್ಲಿ ವಿಜಯಪುರ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಇದು ಕಾಂಗ್ರೆಸ್ ಮುಖಂಡರನ್ನು ಇನ್ನಿಲ್ಲದಂತೆ ಮುಜುಗರಕ್ಕೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲ ಗೃಹ ಖಾತೆ ಹೊಂದಿದ್ದಾರೆ. ಇನ್ನೊಬ್ಬ ನಾಯಕ ಶಿವಾನಂದ ಪಾಟೀಲ ಆರೋಗ್ಯ ಸಚಿವರಾಗಿದ್ದಾರೆ. ಆದರೂ ಕ್ಷೇತ್ರ ಕೈ ತಪ್ಪಿದ್ದು ಭಾರಿ ಹಿನ್ನಡೆಗೆ ಕಾರಣವಾಗಿದೆ.
ಮರಳಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಜಿಲ್ಲೆಯ ಕಾಂಗ್ರೆಸ್ ಮುಖಂಡರು ದೆಹಲಿವರೆಗೆ ಲಾಬಿ ನಡೆಸುತ್ತಿದ್ದಾರೆ. ಇದರ ಜತೆಗೆ ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಹಾಗೂ ಸಿಎಂ ಕುಮಾರಸ್ವಾಮಿ ಮೇಲೆ ಒತ್ತಡ ಹಾಕುವ ತಂತ್ರಗಾರಿಕೆಯನ್ನು ಸಹ ನಡೆಸುತ್ತಿದ್ದಾರೆ. ಜೆಡಿಎಸ್ ಜಿಲ್ಲೆಯಲ್ಲಿ ಅಷ್ಟೇನು ಪ್ರಭಾವ ಹೊಂದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಿಂದ ಎಂ.ಸಿ.ಮನಗೂಳಿ ಹಾಗೂ ನಾಗಠಾಣ ಕ್ಷೇತ್ರದಿಂದ ದೇವಾನಂದ್ ಚವ್ಹಾಣ ಗೆಲುವು ಸಾಧಿಸಿದ್ದರು. ಅದು ಬಿಟ್ಟರೆ ಜಿಪಂ, ತಾಪಂನಲ್ಲಿ ಅಷ್ಟು ಪ್ರಭಾವವಿಲ್ಲ. ಇಷ್ಟಾದರೂ ಕ್ಷೇತ್ರ ಜೆಡಿಎಸ್ಗೆ ನೀಡಿದ್ದು ನೋಡಿದರೆ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಅವರಿಗೆ ಸುಲಭದ ದಾರಿ ಮಾಡಿಕೊಟ್ಟಂತಾಗಿದೆ.
ಬಿಜೆಪಿಯಲ್ಲೂ ಭಿನ್ನಮತ:
ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ತಪ್ಪಿಸಲು ಬಿಜೆಪಿಯಲ್ಲಿ ಸಾಕಷ್ಟು ಪ್ರಯತ್ನ ನಡೆದಿತ್ತು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಹಿರಂಗವಾಗಿಯೇ ಹೊಸಬರಿಗೆ ಟಿಕೆಟ್ ನೀಡಿ ಎಂದು ಹೇಳಿಕೆ ನೀಡಿ ಜಿಗಜಿಣಗಿ ಅವರಿಗೆ ಟಿಕೆಟ್ ತಪ್ಪಿಸಲು ಪ್ರಯತ್ನ ನಡೆಸಿದರೂ ಅದು ಫಲ ನೀಡಿಲ್ಲ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ಸೋಲಿಸಲು ದೊಡ್ಡಗೌಡರು ಕ್ಷೇತ್ರ ಬಿಟ್ಟುಕೊಡುತ್ತಾರಾ ಅಥವಾ ಇಲ್ಲ ಎನ್ನುವುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.