ವಿಜಯಪುರ: ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಡೆಲಿವರಿ ಆದ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆಯ ನಂತರ ಮಾಡಿದ ಹೊಲಿಗೆಗಳು ಬಿಚ್ಚಿರೋ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ತಂಡದಲ್ಲಿ ಎಸಿ, ಡಿಹೆಚ್ ಓ ಹಾಗೂ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ನಿಯಂತ್ರಣಾಧಿಕಾರಿ ಇದ್ದು, ಇವರು ತಕ್ಷಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸು 48ಗಂಟೆಯೊಳಗಾಗಿ ವರದಿ ನೀಡುವಂತೆ ಡಿಸಿಯವರು ಸೂಚನೆ ನೀಡಿದ್ದಾರೆ. ಸಿಜೇರಿಯನ್ ಡೆಲಿವರಿ ಆದ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆಯ ನಂತರ ಮಾಡಿದ ಹೊಲಿಗೆಗಳು ಬಿಚ್ಚಿರೋ ಘಟನೆಗಳು ಬೆಳಕಿಗೆ ಬಂದಿವೆ. ಏಪ್ರಿಲ್ 30 ರಿಂದ ಮೇ 13ರವರೆಗೆ 18 ಬಾಣಂತಿಯರಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಭಾನುವಾರ ಮತ್ತೆ ಐವರು ಬಾಣಂತಿಯರು ಇದೇ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಆಸ್ಪತ್ರೆಯಿಂದ ಮಾಹಿತಿ ಪಡೆದಿದ್ದರು.