ವಿಜಯಪುರ : ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಸ್ವತಂತ್ರವಾಗಿ ಪಾಲಿಕೆಯನ್ನು ವಶಪಡಿಸಿಕೊಳ್ಳಲಿದೆ. ಈ ಮೂಲಕ ಪಾಲಿಕೆ ಮೇಲೆ ಭಗವಾಧ್ವಜ ಹಾರಿಸುವುದಾಗಿ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಮೇಯರ್ ಆಯ್ಕೆ ವೇಳೆ ಬೇರೆ ಪಕ್ಷದವರಿಗೆ ಬೆಂಬಲ ಸೂಚಿಸಿ ಪಕ್ಷಕ್ಕೆ ಮೇಯರ್ ಸ್ಥಾನ ತಪ್ಪಿಸಿದ್ದಾರೆ. ಆದರೆ, ಈ ಬಾರಿ ಹಾಗೆ ನಡೆಯುವುದಿಲ್ಲ, ಈ ಸಲ ಟಿಕೆಟ್ ನೀಡುವಾಗಲೇ ಅವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿ ಟಿಕೆಟ್ ನೀಡಲಾಗುವುದು. ಜೊತೆಗೆ ಮೇಯರ್, ಉಪ ಮೇಯರ್ ಆಯ್ಕೆ ವಿಚಾರ ಬಂದಾಗ ಒಗ್ಗಟ್ಟಿನಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇಲ್ಲವಾದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಗೆ ಉಳಿಯಲಿ ಎಂದು ಸೂಚಿಸಿದರು.
ನಗರದ ಅಭಿವೃದ್ಧಿ ಕಂಡು ಬೇರೆ ಪಕ್ಷದಲ್ಲಿ ಟಿಕೆಟ್ ಬೇಡಿಕೆ ಕಡಿಮೆಯಾಗಿದೆ. ಜೆಡಿಎಸ್ನಲ್ಲಿ ಬಿ ಫಾರ್ಮ್ ಹಿಡಿದುಕೊಂಡು ಕಾಯುತ್ತಿದ್ದಾರೆ. ಕಾಂಗ್ರೆಸ್ ನಲ್ಲಿಯೂ ಇಲ್ಲಿಯವರೆಗೆ 60 ಅರ್ಜಿಗಳು ಬಂದಿವೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಆದರೆ, ಬಿಜೆಪಿಯ ಅಭಿವೃದ್ಧಿ ಕಾಮಗಾರಿ ನೋಡಿ ಟಿಕೆಟ್ ಬೇಡಿಕೆ ಹೆಚ್ಚಾಗಿದೆ. ಎಲ್ಲ ಜಾತಿ, ಉತ್ಸಾಹಿಗಳನ್ನು ನೋಡಿ ವಾರ್ಡ್ ಜನರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲಾಗುವುದು ಎಂದು ಹೇಳಿದರು.
ಈಗಾಗಲೇ ನಾವು ನಗರದ ಬಹುತೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಬರುವ ಪಾಲಿಕೆ ಸದಸ್ಯರಿಗೆ ಮಾಡಲು ಕೆಲಸವೇ ಇಲ್ಲದಂತಾಗಿದೆ. ಕೇವಲ ವಿದ್ಯುತ್ ದ್ವೀಪ ಹಾಕುವುದು, ವಾರ್ಡ್ ಜನರ ಜೊತೆ ಸೌಜನ್ಯದಿಂದ ಮಾತನಾಡಿದರೆ ಸಾಕು, ಮುಂದಿನ ಚುನಾವಣೆಯಲ್ಲಿಯೂ ಗೆಲುವು ಸಾಧಿಸುತ್ತೀರಿ ಎಂದರು. ಈ ಸಲ ಪಾಲಿಕೆಯನ್ನು ವಶಪಡಿಸಿಕೊಳ್ಳುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸ್ಪಷ್ಟವಾಗಿ ಗೆಲ್ಲುವ ಸಂದೇಶವನ್ನು ರವಾನೆ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ :ಬಿಜೆಪಿಯ ಮಾಜಿ ಅಧ್ಯಕ್ಷ ಸುರೇಶ್ ಜೆಡಿಎಸ್ಗೆ ಸೇರ್ಪಡೆ