ಕರ್ನಾಟಕ

karnataka

ETV Bharat / state

ಅತಿಯಾಗಿ ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ : ವಿಜಯಪುರದಲ್ಲಿ ಆರೋಪಿಗಳಿಗೆ ಮೂರು ವರ್ಷ ಶಿಕ್ಷೆ

ಹಾರ್ನ್​ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಂಗಡಿ ಮಾಲೀಕನಿಗೆ ಮಾರಣಾಂತಿಕ ಹಲ್ಲೆ - ಆರೋಪಿಗಳಿಗೆ ಮೂರು ವರ್ಷ ಜೈಲು, 72 ಸಾವಿರ ರೂ ದಂಡ - ವಿಜಯಪುರ ಕೋರ್ಟ್​ ಆದೇಶ

assault-for-questioning-excessive-honking-accused-sentenced-for-three-years
ಅತಿಯಾಗಿ ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಹಲ್ಲೆ : ಆರೋಪಿಗಳಿಗೆ ಮೂರು ವರ್ಷ ಶಿಕ್ಷೆ

By

Published : Jan 23, 2023, 8:48 PM IST

ವಿಜಯಪುರ : ಅತಿಯಾಗಿ ಹಾರ್ನ್​ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪಂಪ್​ಸೆಟ್​ ಅಂಗಡಿ ಮಾಲೀಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ಹಾಗೂ 72 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ನಗರದ ಶಾಹಪೇಟೆ ನಿವಾಸಿಗಳಾದ ತನ್ವೀರ ದಸ್ತಗಿರಸಾಬ ಡೋಣೂರ, ಇರ್ಫಾನ್ ದಸ್ತಗೀರಸಾಬ ಡೋಣೂರ ಹಾಗೂ ಇಸ್ಮಾಯಿಲ್ ಅಲ್ಲಾಭಕ್ಷ ಹೊನ್ನುಟಗಿ ಶಿಕ್ಷೆಗೊಳಗಾದವರು.

ನಗರದ ಶ್ರೀಶೈಲ ಎಂಬುವರ ಪಂಪ್​ಸೆಟ್ ಅಂಗಡಿ ಮುಂದೆ ಟ್ರಾಫಿಕ್ ಜಾಮ್ ಆಗಿದ್ದ ವೇಳೆ ಟಾಟಾ ಏಸ್ ವಾಹನದ ಚಾಲಕ ಅನಾವಶ್ಯಕವಾಗಿ ಹಾರ್ನ್ ಮಾಡಿದ್ದು, ಈ ವೇಳೆ ಅಂಗಡಿ ಮಾಲೀಕ ಇದನ್ನು ಪ್ರಶ್ನಿಸಿದ್ದರು. ಇದರಿಂದ ರೊಚ್ಚಿಗೆದ್ದ ವಾಹನ ಚಾಲಕ ಹಾಗೂ ಆತನ ಸ್ನೇಹಿತರು ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಘಟನೆ ವಿವರ :ನಗರದ ಗಣಪತಿ ಚೌಕ್​ನಲ್ಲಿ ಶ್ರೀಶೈಲ ಬಾಗೇವಾಡಿ ಎಂಬವರು ಮೋಟಾರ್ ಪಂಪಸೆಟ್ ಹಾರ್ಡ್​ವೇರ್ ಅಂಗಡಿ ನಡೆಸುತ್ತಿದ್ದು, 2019 ಏಪ್ರಿಲ್ 30ರಂದು ಅವರ ಅಂಗಡಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಟಾಟಾ ಏಸ್ ವಾಹನದಲ್ಲಿ ಬಂದಿದ್ದ ಶಿಕ್ಷೆಗೊಳಗಾದ ಆರೋಪಿ ತನ್ವೀರ್ ದಸ್ತಗೀರಸಾಬ ಡೋಣೂರು ಸಂಚಾರ ಮುಕ್ತ ಮಾಡುವಂತೆ ಹಾರ್ನ್ ಹೊಡೆದಿದ್ದ. ಪದೇ ಪದೇ ಹಾರ್ನ್ ಹೊಡೆದ ಕಾರಣ ಅಂಗಡಿ ಮಾಲೀಕ ಹಾರ್ನ್ ಹೊಡೆಯಬೇಡ ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ತನ್ವೀರ್ ವಾಹನ ನಿಲ್ಲಿಸಿ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ್ದ. ಬಳಿಕ ತನ್ವೀರ್​ ತನ್ನ ಇಬ್ಬರು ಸ್ನೇಹಿತರಾದ ಇರ್ಫಾನ್ ಹಾಗೂ ಇಸ್ಮಾಯಿಲ್ ಕರೆದುಕೊಂಡು ಮತ್ತೆ ಅಂಗಡಿ ಮಾಲೀಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಅಂಗಡಿಯಲ್ಲಿದ್ದ ಕಂಪ್ಯೂಟರ್, ಟೇಬಲ್ ಗ್ಲಾಸ್ ಒಡೆದು ಹಾಕಿದ್ದರು. ಜೊತೆಗೆ ಅಂಗಡಿ ಮಾಲೀಕರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಎಸ್ ಐ ಆಗಿದ್ದ ಆರೀಫ್ ಮುಶಾಪುರ ತನಿಖೆ ನಡೆಸಿ ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಮೂರು ವರ್ಷ ಜೈಲು, 72 ಸಾವಿರ ರೂ. ದಂಡ :ಇನ್ನು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಾಜಿ ನಾಲವಾಡೆ, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಮೂರು ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತಾದ ಹಿನ್ನೆಲೆ ಮಾರಣಾಂತಿಕ‌ ಹಲ್ಲೆಗೆ ಮೂರು ವರ್ಷ ಜೈಲು ಶಿಕ್ಷೆ, ಜೀವ ಬೆದರಿಕೆ, ವಸ್ತುಗಳು ನಾಶ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ 72 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಕೆ.ಕೆ. ಕುಲಕರ್ಣಿ ಹಾಗೂ ಎಸ್.ಎಚ್. ಹಕೀಮ್ ವಾದ ಮಂಡಿಸಿದ್ದರು.

ಇದನ್ನೂ ಓದಿ :ದೇವನಹಳ್ಳಿ ಅಪರಿಚಿತ ಶವ ಪತ್ತೆ ಪ್ರಕರಣ : ಕತ್ತರಿಸಿದ ಬೆರಳು ಜೋಡಿಸಿ ಕೊಲೆ ಕೇಸ್​ ಭೇದಿಸಿದ ವಿಜಯಪುರ ಪೊಲೀಸರು

ABOUT THE AUTHOR

...view details