ವಿಜಯಪುರ : ಭಾರತೀಯ ಆಡಳಿತ ಸೇವೆಗೆ ಅಭ್ಯರ್ಥಿಗಳ ಆಯ್ಕೆಗೆ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಜಿಲ್ಲೆಯ ಯಲಗೂರೇಶ ಅರ್ಜುನ ನಾಯಕ 890ನೇ ರ‍್ಯಾಂಕ್ ಪಡೆದಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾ ನಿವಾಸಿಯಾದ ಯಲಗೂರೇಶ 2018ರಲ್ಲಿ ಬಿಕಾಂ ಪದವಿ ಮುಗಿಸಿದ್ದು, ಕುಟುಂಬದ ಬಡತನದ ಮಧ್ಯೆಯೂ ಉತ್ತಮ ಸಾಧನೆ ಮಾಡಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯನ್ನು ಸತತವಾಗಿ ನಾಲ್ಕನೇ ಬಾರಿ ಎದುರಿಸಿ ಯಶಸ್ಸು ಸಾಧಿಸಿರುವ ಯಲಗೂರೇಶ ಕನ್ನಡದಲ್ಲೇ ಪರೀಕ್ಷೆ ಬರೆದಿರುವುದು ವಿಶೇಷವಾಗಿದೆ. ಯಲಗೂರೇಶ ಅವರು ಸರೂರ ತಾಂಡಾದಲ್ಲಿ ಪ್ರಾಥಮಿಕ ಶಿಕ್ಷಣ, ಮುದ್ದೇಬಿಹಾಳದ ಸಂತ ಕನಕದಾಸ ಶಾಲೆಯಲ್ಲಿ 6ರಿಂದ 10ನೇ ತರಗತಿ ಮತ್ತು ಎಂಜಿವಿಸಿ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಮತ್ತು ಪದವಿಯನ್ನು ವಸತಿ ನಿಲಯದಲ್ಲಿ ಉಳಿದುಕೊಂಡು ಮುಗಿಸಿದ್ದಾರೆ.
ಇದನ್ನೂ ಓದಿ :ಯುಪಿಎಸ್‌ಸಿ ಪರೀಕ್ಷೆಯಲ್ಲಿ ಡಾ ರಾಜ್ಕುಮಾರ್ ಅಕಾಡೆಮಿಯಿಂದ 11 ಮಂದಿ ಪಾಸ್..
ಯುಪಿಎಸ್ಸಿಯಲ್ಲಿ ತೇರ್ಗಡೆಗೊಂಡಿರುವ ಯಲಗೂರೇಶ, ಯಾವುದೇ ಕೋಚಿಂಗ್ ಸೆಂಟರ್‌ನಿಂದ ಕೋಚಿಂಗ್ ಪಡೆದಿಲ್ಲ. ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಬಳಿಯ ಇರುವ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿ ಈ ಸಾಧನೆ ಮಾಡಿರುವುದಾಗಿ ಯಲಗೂರೇಶ ತಿಳಿಸಿದ್ದಾರೆ. ತಂದೆ ಎಲ್‌ಐಸಿ ಏಜೆಂಟ್‌ರಾಗಿದ್ದು, ಅವರು ಕುಟುಂಬದಿಂದ ಪ್ರತ್ಯೇಕವಾಗಿದ್ದು, ಸಂಪೂರ್ಣ ಕುಟುಂಬದ ನಿರ್ವಹಣೆ ತಾಯಿ ಮೇಲೆ ಬಿದ್ದಿತ್ತು.
ಇದನ್ನೂ ಓದಿ :UPSC Results 2023.. ರಾಜ್ಯಕ್ಕೆ ಕೀರ್ತಿ ತಂದ 20ಕ್ಕೂ ಹೆಚ್ಚು ಸಾಧಕರ ಮಾಹಿತಿ
ಈ ನಡುವೆಯೂ ಯಲಗೂರೇಶ ಧೃತಿಗೆಡದೇ ಯಶಸ್ಸನ್ನು ಕಂಡಿದ್ದಾರೆ. ಇವರಿಗೆ ಇಬ್ಬರು ಸಹೋದರರು, ಮೂವರು ಸಹೋದರಿಯರಿದ್ದಾರೆ. ಇದರಲ್ಲಿ ಇಬ್ಬರಿಗೆ ಮದುವೆಯಾಗಿದ್ದು, ಅಣ್ಣ ಮೈಸೂರಿನಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಸಹೋದರ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡುತ್ತಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಬಿಟ್ಟು, ಸಿವಿಲ್ ಸರ್ವೀಸ್ಗೆ ಆಯ್ಕೆ :ಮೈಸೂರಿನ ಪೂಜಾ ಎಂಬುವರು ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಬಳಿಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ ಇನ್ನು ಉನ್ನತ ಸ್ಥಾನಕ್ಕೆ ತಲುಪಬೇಕು ಎಂಬ ಆ ಹಠ 2022 ರಲ್ಲಿ ಸಿವಿಲ್ ಸರ್ವೀಸ್ ತೆಗೆದುಕೊಳ್ಳಬೇಕು ಎಂಬ ನಿರ್ಧಾರಕ್ಕೆ ಅವರನ್ನು ಕರೆದುಕೊಂಡು ಬಂದಿತ್ತು. ನಂತರ ಕೆಲಸ ಬಿಟ್ಟು ಮನೆಯಲ್ಲೇ ಕಠಿಣ ಪರಿಶ್ರಮದಿಂದ ಓದಿ ತನ್ನ ಮೊದಲ ಯುಪಿಎಸ್‌ಸಿ ಪರೀಕ್ಷೆ ಬರೆದಾಗ, ಪ್ರಿಲಿಮ್ಸ್ ಪರೀಕ್ಷೆ ಕೂಡ ಪಾಸಾಗಿರಲಿಲ್ಲ. ಆದರೆ, ತನ್ನ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 390ನೇ ರ‍್ಯಾಂಕ್ ಪಡೆದಿದ್ದಾರೆ.
ಐಎಫ್ಎಸ್ ಅಧಿಕಾರಿ ಮಗಳು617 ನೇ ರ‍್ಯಾಂಕ್ : ಶಿವಮೊಗ್ಗದ ನಿವೃತ್ತ ಐಎಫ್ಎಸ್ ಅಧಿಕಾರಿ ಐ.ಎಂ ನಾಗರಾಜ್ ಅವರ ಮಗಳು ಮೇಘನಾ ಈ ಬಾರಿಯ ಯುಪಿಎಸ್‌ಸಿ 2022- 23ನೇ ಸಾಲಿನಲ್ಲಿ 617 ನೇ ರ‍್ಯಾಂಕ್ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ :ನನ್ನ ಮಗ ಏನು ಓದಿದ್ದಾನೆ ಎಂಬುದೇ ಗೊತ್ತಿರಲಿಲ್ಲ: UPSC ಪಾಸಾದ ಕಂಡಕ್ಟರ್ ಮಗ ಸಿದ್ದಲಿಂಗಪ್ಪ ತಾಯಿಯ ಮುಗ್ದ ಮಾತು