ವಿಜಯಪುರ:ಉತ್ತರ ಕರ್ನಾಟಕದ ಜಾತ್ರೆಗಳು ವಿಶೇಷತೆಯಿಂದ ಕೂಡಿರುತ್ತವೆ. ಅದರಲ್ಲಿ ಛಟ್ಟಿ ಅಮಾವಾಸ್ಯೆಯ ಸಂದರ್ಭದಲ್ಲಿ ನಡೆಯುವ ವಿಜಯಪುರ ಜಿಲ್ಲೆಯ ಅರಕೇರಿ ಜಾಲಗೇರಿ ಭಾಗದ ಮುಮ್ಮುಟ್ಟಿಗುಡ್ಡದ ಅಮೋಘಸಿದ್ದೇಶ್ವರನ ಜಾತ್ರೆಗೆ ಉತ್ತರ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಭಕ್ತಿಭಾವದಲ್ಲಿ ಮಿಂದೇಳುತ್ತಾರೆ. ಈ ಜಾತ್ರೆಯನ್ನು ಭಂಡಾರದೊಡೆಯನ ಜಾತ್ರೆ ಎಂದೇ ಕರೆಯಲಾಗುತ್ತೆ.
ಕೈಲಾಸವಾಸಿಯಾಗಿದ್ದ ಅಮೋಘ ಸಿದ್ದೇಶ್ವರ, ಶಿವ ಪಾರ್ವತಿಯರ ಸೇವಕರಾಗಿದ್ದರು. ಅಮೋಘ ಸಿದ್ದೇಶ್ವರನ ಸೇವೆಗೆ ಶಿವ ಪಾರ್ವತಿಯರು ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ಶಕ್ತಿ ಕರುಣಿಸಿ ಭೂಲೋಕದಲ್ಲಿ ಸೇವೆ ಮಾಡುವಂತೆ ಹೇಳಿದರಂತೆ. ಭೂಲೋಕಕ್ಕೆ ಬಂದ ಅಮೋಘ ಸಿದ್ದೇಶ್ವರ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದರಂತೆ.
ಸಾವಿರಾರು ವರ್ಷಗಳ ಹಿಂದೆ ಅರಕೇರಿ ಜಾಲಗೇರಿ ಗ್ರಾಮದ ಮಧ್ಯೆದ ಮುಮ್ಮಟ್ಟಿಗುಡ್ಡದಲ್ಲಿ ನೆಲೆಸಿರುವ ಅಮೋಘ ಸಿದ್ದೇಶ್ವರ ಹಲವು ಪವಾಡಗಳ ಮೂಲಕ ಭಕ್ತರ ಉದ್ಧಾರ ಮಾಡುತ್ತಿದ್ದಾರೆ. ಮಕ್ಕಳಾಗದವರಿಗೆ ಸಂತಾನ ಭಾಗ್ಯ, ಸಿರಿಸಂಪತ್ತು, ಭಕ್ತರ ಕಷ್ಟ ಪರಿಹರಿಸೋ ಪವಾಡ ಪುರುಷರಾಗಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಮೂರು ದಿನಗಳ ಕಾಲ ಚೆಟ್ಟಿ ಅಮಾವಾಸ್ಯೆಯಂದು ಅಮೋಘ ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಇಲ್ಲಿಯ ಮತ್ತೊಂದು ವಿಶೇಷತೆ ಎಂದರೆ ಜಾತ್ರೆಗೆಂದು ವಿವಿಧ ಗ್ರಾಮಗಳಿಂದ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುತರುತ್ತಾರೆ.