ವಿಜಯಪುರ: ಅಪ್ರಾಪ್ತೆ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಸಂಬಂಧಿಕರು, ಪರಿಚಯಸ್ಥರಿಂದಲೇ ಹೆಚ್ಚು ಕಂಡು ಬರುತ್ತಿವೆ ಎಂಬುದು ಮಕ್ಕಳ ಸಹಾಯವಾಣಿಗೆ ಬರುವ ದೂರವಾಣಿ ಕರೆಯಿಂದ ತಿಳಿದುಬಂದಿದೆ. ಆದರೆ, ಬಾಲಕಿಯ ಪೋಷಕರು ಮರ್ಯಾದೆಗೆ ಅಂಜಿ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದು, ಮತ್ತಷ್ಟು ಅತ್ಯಾಚಾರಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದರೆ, ಮುಂದಿನ ದಿನಗಳನ್ನು ಆ ಪ್ರಕರಣಗಳು ಇಳಿಮುಖವಾಗುವ ಸಾಧ್ಯತೆ. ಆದರೆ, ರಾಜಕೀಯ ಸೇರಿದಂತೆ ಪ್ರಭಾವಿಗಳಿಂದ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ. ಈ ಮೂಲಕ ಎಷ್ಟೇ ಕಠಿಣ ಕಾನೂನುಗಳಿದ್ದರೂ ಅವು ಪ್ರಭಾವಿಗಳ ಎದುರು ಸೋಲುತ್ತಿವೆ ಎಂಬುದು ಮಹಿಳಾ ಸಂಘಟನೆಗಳ ವಾದವಾಗಿದೆ.