ವಿಜಯಪುರ:ಕಳೆದ 5 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬ 4 ಕೋಟಿಗೂ ಅಧಿಕ ಹಣದೊಂದಿಗೆ ಪರಾರಿಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ: ಚೀಟಿ ವ್ಯವಹಾರದ ಹೆಸರಿನಲ್ಲಿ 4 ಕೋಟಿ ರೂ. ವಂಚಿಸಿ ವ್ಯಕ್ತಿ ಪರಾರಿ ದಾನಪ್ಪ ಎಂಬಾತ ಕಳೆದ 5 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದ. ಈತನನ್ನು ನಂಬಿ ನಗರದ ಅಲ್ಲಾಪುರ ಬಡಾವಣೆ, ಜಯಕರ್ನಾಟಕ ಕಾಲೋನಿ ಹಾಗೂ ನಾಗೇಶ್ವರ ಕಾಲೋನಿಯ 210 ಜನರು ಚೀಟಿ ವ್ಯವಹಾರದಲ್ಲಿ ತೊಡಗಿದ್ದರು. ದಾನಪ್ಪ ಇವರಿಂದ ಪ್ರತಿ ತಿಂಗಳು ಕಂತಿನ ರೂಪದಲ್ಲಿ 5,000 ದಿಂದ 50,000ವರೆಗೂ ಹಣ ಕಟ್ಟಿಸಿಕೊಳ್ಳುತ್ತಿದ್ದ. ಆದರೆ, 210 ಜನರ ಪೈಕಿ ಕೆಲವರಿಗೆ ಮಾತ್ರ ಹಣ ನೀಡಿ, 4 ಕೋಟಿಗೂ ಅಧಿಕ ಹಣದೊಂದಿಗೆ ಫೆಬ್ರವರಿ 3ರಂದು ಪರಾರಿಯಾಗಿದ್ದಾನೆ.
ಹಣ ಕಳೆದುಕೊಂಡವರು ದಾನಪ್ಪ ವಿರುದ್ಧ ಗೋಲ್ ಗುಂಬಜ್ ಪೊಲೀಸ್ ಠಾಣೆ ಹಾಗೂ ಗಾಂಧಿ ಚೌಕ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದಂತೆ. ಆದರೆ, ಪ್ರಕರಣಕ್ಕೆ ಸರಿಯಾದ ಸಾಕ್ಷ್ಯಾಧಾರ ಲಭ್ಯವಿಲ್ಲದ ಕಾರಣ ದಾನಪ್ಪನನ್ನು ಠಾಣೆಗೆ ಕರೆಯಿಸಿ ಹಣ ನೀಡುವಂತೆ ಪೊಲೀಸ್ ಅಧಿಕಾರಿಗಳು ತಾಕೀತು ಮಾಡಿದ್ದರು. ಈ ವೇಳೆ ತಪ್ಪೊಪ್ಪಿಕೊಂಡ ದಾನಪ್ಪ, ಮತ್ತೆ ಹಣ ನೀಡದೇ ಪರಾರಿಯಾಗಿದ್ದಾನೆಂದು ಆರೋಪಿಸಿದ್ದಾರೆ.
ಈ ಬಗ್ಗೆ ದಾನಪ್ಪನ ಅತ್ತೆಯನ್ನು ಕೇಳಿದರೆ, ನಾನು ಚೀಟಿ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಅವರು ಈ ರೀತಿ ಮಾಡಿದರೆ ನಾನೇನು ಮಾಡಲಿ. ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ಕೂಲಿ ಮಾಡಿ ಬದಕು ನಡೆಸುವವಳು. ತಪ್ಪು ಮಾಡಿದರೆ ಶಿಕ್ಷೆಯಾಗಲಿ ಎನ್ನುತ್ತಿದ್ದಾರೆ.
.