ಭಟ್ಕಳ (ಉತ್ತರಕನ್ನಡ): ಡೆಂಘೀ ಜ್ವರದಿಂದ ಬಳಲುತ್ತಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಉಡುಪಿಯ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರುವ ವೇಳೆ ಯುವಕ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಮಾವಿನಕುರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಗೋಡ ನಿವಾಸಿ ಪ್ರಜ್ವಲ ಖಾರ್ವಿ(24) ಎಂದು ಗುರುತಿಸಲಾಗಿದೆ.
ಮೃತ ಪ್ರಜ್ವಲ್ ಖಾರ್ವಿ ಇಲ್ಲಿನ ಸಾಗರ ಶ್ರೀ ಬೋಟ್ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಒಂದು ವಾರದಿಂದ ಪ್ರಜ್ವಲ್ ಡೆಂಘೀ ಜ್ವರದಿಂದ ಬಳಲುತ್ತಿದ್ದ. ಈ ಸಂಬಂಧ ಅಕ್ಟೋಬರ್ 19ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಜ್ವರ ಹೆಚ್ಚಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 2 ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಇಲ್ಲಿಂದ ಡಿಸ್ಚಾರ್ಜ್ ಮಾಡಿಕೊಂಡು ಭಟ್ಕಳಕ್ಕೆ ಬರುವ ವೇಳೆ ಯುವಕ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಡೆಂಘೀ ತಾಣವಾಗಿರುವ ಭಟ್ಕಳ ಬಂದರು: ಕಳೆದ ಜೂನ್, ಜುಲೈನಿಂದ ತಿಂಗಳಲ್ಲಿ ಬಂದರು ಸುತ್ತಮುತ್ತಲಿನ ಸ್ವಚ್ಛತೆಗಾಗಿ ಟೆಂಡರ್ ಕರೆಯಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಬಂದರು ಮೀನುಗಾರಿಕೆ ಸೊಸೈಟಿ ಈ ಟೆಂಡರ್ ಪಡೆದಿದ್ದು, ಮೀನುಗಾರಿಕಾ ಇಲಾಖೆ ಟೆಂಡರ್ ನೀಡದೇ ಇರುವ ಕಾರಣ ಬಂದರು ಸುತ್ತಮುತ್ತಲಿನ ನೀರು ನಿಂತು ದುರ್ಗಂಧ ಬೀರುತ್ತಿದೆ. ಸ್ವಚ್ಛತೆಯನ್ನು ಕಡೆಗಣಿಸಿರುವ ಕಾರಣ ಈ ಭಾಗದಲ್ಲಿ ಹೆಚ್ಚು ಡೆಂಘೀ ಪ್ರಕರಣ ಕಂಡು ಬಂದಿದೆ.
ಇದನ್ನೂ ಓದಿ :ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2.5 ಕೋಟಿ ವಂಚನೆ ಆರೋಪ: ಚೈತ್ರಾ ಮಾದರಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ