ಕಾರವಾರ:ಕರಾವಳಿ ನಗರಿ ಕಾರವಾರದಲ್ಲಿ ಸಾಗರಮಾಲಾ ಯೋಜನೆ ಸಾಕಷ್ಟು ಸದ್ದು ಮಾಡಿದ್ದು, ಮೀನುಗಾರರಿಂದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಸದ್ಯ ಕಾಮಗಾರಿಯನ್ನ ಸ್ಥಗಿತಗೊಳಿಸಲಾಗಿದೆ. ಆದ್ರೆ ಇದೀಗ ಅದೇ ಕಡಲ ತೀರದಲ್ಲಿ ಯೋಜನೆ ರೂಪಿಸದೆ, ಯಾರಿಗೂ ಮಾಹಿತಿ ನೀಡದೇ ಅಲೆ ತಡೆಗೋಡೆಯಂತಹ ಕಾಮಗಾರಿಯೊಂದನ್ನು ಕೈಗೊಳ್ಳುತ್ತಿದ್ದು, ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಡಲ ತೀರದಲ್ಲಿ ಕಲ್ಲು, ಮಣ್ಣು ಸುರಿದು ಕಾಮಗಾರಿ: ಆತಂಕಕ್ಕೊಳಗಾದ ಮೀನುಗಾರರಿಂದ ವಿರೋಧ ಹೌದು, ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಕಳೆದ ಕೆಲ ದಿನಗಳಿಂದ ಅಲೆ ತಡೆಗೋಡೆಯಂತಹ ಕಾಮಗಾರಿಯೊಂದನ್ನ ನಡೆಸಲಾಗುತ್ತಿದೆ. ಸಮುದ್ರ ತೀರದಲ್ಲಿ ಕಲ್ಲ-ಮಣ್ಣಿನ ರಾಶಿ ಹಾಕಲಾಗಿದ್ದು, ಜೆಸಿಬಿಯಿಂದ ಸಮುದ್ರದಲ್ಲಿ ಕಾಮಗಾರಿಯನ್ನ ಕೈಗೊಳ್ಳಲಾಗಿದೆ.
ಈ ಹಿಂದೆ ಸಾಗರಮಾಲಾ ಯೋಜನೆಯಲ್ಲಿ ಅಲೆತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದು, ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಏಕಾಏಕಿ ಯಾವುದೇ ಮಾಹಿತಿ ನೀಡದೇ ಕಾಮಗಾರಿ ಕೈಗೊಂಡಿದ್ದು, ಸಿಆರ್‌ಝಡ್ ವಲಯದಲ್ಲಿ ಯಾವುದೇ ಅನುಮತಿ ಪಡೆಯದೇ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಮೀನುಗಾರ ಮುಖಂಡ ರಾಜು ತಾಂಡೇಲ ಆರೋಪಿಸಿದ್ದಾರೆ.
ಇನ್ನು ಕಡಲ ತೀರದಲ್ಲಿ ಈ ಹಿಂದೆ ಸಾಗರಮಾಲಾ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದ ಸ್ಥಳದ ಸಮೀಪದಲ್ಲೇ ಇದೀಗ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಬಂದರು ಇಲಾಖೆಗೆ ಸೇರಿದ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೇ ಕಾಮಗಾರಿಯನ್ನು ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಕೇಳಿದ್ರೆ, ಪ್ರತಿ ವರ್ಷದಂತೆ ಮಳೆಗಾಲಕ್ಕೆ ಮುನ್ನ ನಗರದ ಕೊಳಚೆ ಸಾಗಿಸುವ ಕೋಣೆನಾಲಾವನ್ನು ಸ್ವಚ್ಛಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಅದರಂತೆ ಈ ಬಾರಿ ಸಹ ಕೋಣೆನಾಲಾ ಪ್ರದೇಶದಲ್ಲಿ ಮರಳನ್ನು ತೆಗೆದು ಅದು ಮುಚ್ಚದಂತೆ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಸಲಾಗುತ್ತಿದೆ. ಆದ್ರೆ ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ನಗರಸಭೆ ಪ್ರಭಾರಿ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.