ಕಾರವಾರ:ನೌಕಾನೆಲೆಗೆ ಹೊಂದಿಕೊಂಡಿರುವ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ಆಗಮಿಸಿ ಸರ್ವೇ ಕಾರ್ಯ ನಡೆಸಿದ್ದರಿಂದ ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಸಿಟ್ಟಿಗೆದ್ದ ತಾಲೂಕಿನ ಅಲಗೇರಿ, ಬಡಗೇರಿ, ಭಾವಿಕೇರಿ ಗ್ರಾಮಗಳ ನಿವಾಸಿಗಳು ಅಂಕೋಲಾ ತಹಶಿಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.
ಅಲ್ಲದೆ, ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಸರ್ವೆಗೆ ಮುಂದಾದ ಅಧಿಕಾರಿಗಳನ್ನು ಅಟ್ಟಾಡಿಸಿಕೊಂಡು ಓಡಿಸುವ ರೀತಿ ಅಣಕಿಸಿ ಪ್ರದರ್ಶಿಸಿ ಗಮನ ಸೆಳೆದರು. ಜನ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರದ ನಿಲುವನ್ನು ಖಂಡಿಸಿದ ಪ್ರತಿಭಟನಾನಿರತರು, ಈ ಕೂಡಲೇ ಹೊರಡಿಸಿರುವ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ ಅಲಗೇರಿ, ಬಡಗೇರಿ ಭಾವಿಕೇರಿಯಲ್ಲಿ 6 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ನೌಕಾನೆಲೆ, ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ಧಾರಿ ನಿರ್ಮಾಣದಿಂದಾಗಿ ಅಷ್ಟೂ ಮಂದಿ ಮೂರು ಬಾರಿ ನಿರಾಶ್ರಿತರಾಗಿದ್ದೇವೆ. ಮತ್ತೆ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿಯೇ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಡಸರು ಮನೆಯಲ್ಲಿಲ್ಲದ ಸಂದರ್ಭದಲ್ಲಿ ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ. ವಿಮಾನ ನಿಲ್ದಾಣ ನಿರ್ಮಿಸಿದರೆ, ನಮ್ಮ ಬದುಕು ಮತ್ತೆ ಬೀದಿಗೆ ಬರುತ್ತದೆ. ಹೀಗಾದರೆ ಕತ್ತಲಲ್ಲಿರುವ ನಾವು ಬೆಳಕಿಗೆ ಬರುವುದು ಯಾವಾಗ? ಯಾವುದೇ ಕಾರಣಕ್ಕೂ ಜಾಗ ನೀಡುವುದಿಲ್ಲ. ಜಾಗ ತೆಗೆದುಕೊಳ್ಳಬೇಕೆಂದರೆ ನಮ್ಮ ಹೆಣದ ಮೇಲೆ ನಿಲ್ದಾಣ ನಿರ್ಮಿಸಲಿ ಎಂದು ಸುರೇಶ್ ನಾಯ್ಕ ಅಳಲು ತೋಡಿಕೊಂಡಿದ್ದಾರೆ.
ಈ ಮೊದಲು ನೌಕಾನೆಲೆ ನಿರ್ಮಿಸುವಾಗ ಉದ್ಯೋಗ, ಮನೆ, ಜಾಗ ಪರಿಹಾರ ಕೊಡುವುದಾಗಿ ಹೇಳಿ ಕೃಷಿ ಭೂಮಿ ಕಸಿದುಕೊಂಡು ನಿರಾಶ್ರಿತರನ್ನಾಗಿ ಮಾಡಿದರು. ಇಲ್ಲಿ ಅಜ್ಜ, ಅಪ್ಪಂದಿರು ಭತ್ತ, ತೆಂಗು, ಶೇಂಗ, ಕಲ್ಲಂಗಡಿ ಬೆಳೆಯುತ್ತಿದ್ದವರು. ಜಮೀನು ನೀಡಿದ ಬಳಿಕ ಪರಿಹಾರ, ಉದ್ಯೋಗಕ್ಕಾಗಿ ಅಲೆದು ಮೃತಪಟ್ಟಿದ್ದಾರೆ. ಇತ್ತ ಪರಿಹಾರವೂ ಕೈಗೆ ಬಂದಿಲ್ಲ. ಇದೀಗ ಸ್ವಲ್ಪ ಭೂಮಿಯನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಇಂದು ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಈ ನಿರ್ಧಾರ ಕೈ ಬಿಡದಿದ್ದರೆ, ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.