ಶಿರಸಿ:ಹೇರಳವಾದ ಅರಣ್ಯ ಹಾಗೂ ಜಲ ಸಂಪತ್ತನ್ನು ಹೊಂದಿದ್ದ ಮಲೆನಾಡಿನಲ್ಲಿ ಇತ್ತೀಚೆಗೆ ಬರದ ಕರಿ ನೆರಳು ಆವರಿಸುತ್ತಿದೆ. ಮಲೆನಾಡಿನ ಭಾಗವಾದ ಉತ್ತರ ಕನ್ನಡ ಜಿಲ್ಲೆಯಲ್ಲೂ ನೂರಾರು ಕೆರೆ, ಬಾವಿಗಳು ಬತ್ತಿದ್ದು, ಪ್ರಮುಖ ನದಿಗಳು ತಮ್ಮ ಹರಿವನ್ನು ನಿಲ್ಲಿಸಿವೆ. ಇದರಿಂದ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿಕೊಂಡಿದೆ.
ಮಾನವನ ಐಷಾರಾಮಿ ಜೀವನ ವಿಧಾನ, ಅರಣ್ಯ ನಾಶ ಇನ್ನಿತರ ಕಾರಣಗಳಿಂದ ಮಲೆನಾಡಿನಲ್ಲೂ ಕೂಡ ಕಳೆದ 3-4 ವರ್ಷಗಳಿಂದ ಬರಗಾಲದ ಭೀಕರತೆ ಅರಿವಾಗುತ್ತಿದೆ. ಕುಡಿಯುವ ನೀರಿಗಾಗಿ ಜಿಲ್ಲೆಯ ಹಲವೆಡೆ ಸಾರ್ವಜನಿಕರು ಪರಿತಪಿಸುವುದನ್ನು ಕಂಡಿದ್ದೇವೆ. ಬರಗಾಲ ಕಲಿಸಿದ ಪಾಠದಿಂದ ವಿವಿಧೆಡೆ ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳು ಎಚ್ಚೆತ್ತುಕೊಂಡು ಜಲ ಮೂಲಗಳನ್ನು ಪುನಶ್ಚೇತನಗೊಳಿಸಿದ್ದು, ಆಯಾ ಭಾಗದಲ್ಲಿ ನೀರಿನ ಸಮಸ್ಯೆ ನೀಗಿದೆ.
ಉತ್ತರ ಕನ್ನಡ ಜಿಲ್ಲೆಗೆ ತಟ್ಟಿದ ಬರದ ಕರಿ ನೆರಳು ಆದರೂ ಸಹ ಈ ಬಾರಿಯೂ ಬರಗಾಲ ಸಮಸ್ಯೆ ಎದುರಾಗಿದ್ದು, ಘಟ್ಟದ ಮೇಲಿನ ತಾಲೂಕುಗಳಲ್ಲಿ ಕೆರೆ, ಬಾವಿಗಳು ಬತ್ತಿದರೆ, ಕರಾವಳಿ ಭಾಗದಲ್ಲಿನ ಬಾವಿಗಳಲ್ಲಿ ಉಪ್ಪು ನೀರು ಬರುತ್ತಿದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಶಿರಸಿಯಲ್ಲಿ ಪ್ರಸಕ್ತ ಸಾಲಿನಲ್ಲಿ ದಿನದಿಂದ ದಿನಕ್ಕೆ ಬಿಸಲಿನ ಆರ್ಭಟ ಹೆಚ್ಚುತ್ತಿದೆ. ತಂಪಾದ ನಾಡು ಶಿರಸಿಯಲ್ಲಿ 38-40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ಝಳಕ್ಕೆ ಜಲ ಮೂಲಗಳು ಬರಿದಾಗುತ್ತಿವೆ.
ನೀರಿನ ಮೂಲಗಳಾದ ಕೆರೆ, ಹಳ್ಳ, ಬಾವಿಗಳ ನೀರಿನಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಇನ್ನು ದಶಕಗಳಿಂದ ನಿರ್ವಹಣೆಯಿಲ್ಲದ ಕೆರೆಗಳು ಬಂಜರು ಭೂಮಿಯಾಗಿ ಪುನಶ್ಚೇತನಕ್ಕೆ ಕಾಯುತ್ತಿವೆ. ಜಿಲ್ಲೆಯ ಪ್ರಮುಖ ನದಿಗಳಾದ ವರದೆ, ಬೇಡ್ತಿ, ಶಾಲ್ಮಲಾ ತಮ್ಮ ಹರಿವನ್ನು ನಿಲ್ಲಿಸಿವೆ. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದ ಕೃಷಿ ಭೂಮಿ ನೀರಿಲ್ಲದೇ ಹಾಳಾಗುತ್ತಿದೆ.
ಬರಗಾಲ ಬರುವ ನಿರೀಕ್ಷೆ ಇರುವ ಕಾರಣ ಜಿಲ್ಲಾಡಳಿತವೂ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಅಗತ್ಯ ಇದ್ದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. 27 ಕಡೆ ಖಾಸಗಿ ಬೋರ್ವೆಲ್ಗಳನ್ನು ಹೈರ್ ಮಾಡಿದೆ. ನೀರಿನ ಸಮಸ್ಯೆ ಕಂಡು ಬಂದ ಭಾಗಗಳಲ್ಲಿ ಕೆಲವೇ ಗಂಟೆಗಳಲ್ಲಿ ವ್ಯವಸ್ಥೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಸಮಸ್ಯೆಯಿದ್ದು, ಎಲ್ಲೂ ನೀರಿನ ಅಭಾವ ಆಗದಂತೆ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದೆ.