ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ವಾಸಿಗಳ ಆತಂಕ ದಿನೇ ದಿನೆ ಹೆಚ್ಚಾಗತೊಡಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಮಾಡಿದ ಮನವಿಗಳು ವ್ಯರ್ಥವಾಗಿವೆ. ಅರಣ್ಯ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿದರೂ ಸರ್ಕಾರ ಮಾತ್ರ ಅರಣ್ಯವಾಸಿಗಳಿಗೆ ಕಿಂಚಿತ್ತೂ ಸ್ಪಂದನೆ ನೀಡುತ್ತಿಲ್ಲ. ಇದೇ ಕಾರಣಕ್ಕೆ ರೊಚ್ಚಿಗೆದ್ದಿರುವ ಅರಣ್ಯವಾಸಿಗಳು ಇದೀಗ ಹೋರಾಟ ತೀವ್ರಗೊಳಿಸಿದ್ದಾರೆ.
ಉತ್ತರ ಕನ್ನಡ ರಾಜ್ಯದಲ್ಲಿಯೇ ಭೌಗೋಳಿಕವಾಗಿ ವಿಶಾಲವಾಗಿರುವ ಜಿಲ್ಲೆಗಳಲ್ಲೊಂದು. ಮಾತ್ರವಲ್ಲದೇ ಬಹುಭಾಗ ಅರಣ್ಯ ಪ್ರದೇಶದಿಂದಲೇ ಕೂಡಿರುವ ಜಿಲ್ಲೆ ಇದಾಗಿದ್ದು, ಬಹುಸಂಖ್ಯಾತರು ಅರಣ್ಯ ಭೂಮಿಯನ್ನೇ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಭೂಮಿಯ ಹಕ್ಕು ಪಡೆಯಲು ಜಿಲ್ಲಾದ್ಯಂತ ಸುಮಾರು 89 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಆದರೆ, 69 ಸಾವಿರ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಉಳಿದಂತೆ 398 ಪಾರಂಪರಿಕ ಅರಣ್ಯವಾಸಿಗಳು, 1,126 ಸಮುದಾಯದ ಉದ್ದೇಶಕ್ಕೆ ಸೇರಿ ಶೇ.3.2ರಷ್ಟು ಮಾತ್ರ ಹಕ್ಕು ನೀಡಲಾಗಿದೆ.
ಹೊನ್ನಾವರದಲ್ಲಿ ಬೃಹತ್ ಹೋರಾಟ:ಕಾಯ್ದೆ ಸರಿಯಾಗಿ ತಿಳಿಯದೇ ಅಧಿಕಾರಿಗಳು ಸಾರಾಸಗಟಾಗಿ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸದಸ್ಯರು ಕಳೆದೊಂದು ತಿಂಗಳಿಂದ 500 ಗ್ರಾಮಗಳಿಗೆ ಹೋರಾಟ ವಾಹಿನಿ ಮೂಲಕ ಸಂಚಾರ ಮಾಡಿ ಜಾಗೃತಿ ಜಾಥಾ ಕೈಗೊಂಡಿದ್ದಾರೆ.