ಕಾರವಾರ: ಅವರೆಲ್ಲರೂ ತಮ್ಮದಲ್ಲದ ತಪ್ಪಿಗೆ ರೋಗಬಾಧೆಗೆ ಒಳಗಾದವರು. ಮಾತ್ರವಲ್ಲದೇ ಅಂಗಾಂಗ ವೈಕಲ್ಯಕ್ಕೊಳಗಾಗಿ ನಿತ್ಯದ ಬದುಕು ನಡೆಸುವುದಕ್ಕೂ ಸಂಕಷ್ಟ ಅನುಭವಿಸುತ್ತಿರುವವರು. ಆದರೆ, ಇಂತಹವರನ್ನು ಗುರುತಿಸುವಲ್ಲಿ ಆದ ಪ್ರಮಾದದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಿಷ್ಟು ಮಂದಿಗೆ ಸಿಗಬೇಕಿದ್ದ ಸೌಲಭ್ಯಗಳು ಸಿಗದೇ ಸಂಕಷ್ಟದ ಬದುಕು ನಡೆಸುವಂತಾಗಿದೆ.
ಕಳೆದ ಎರಡು ದಶಕಗಳ ಹಿಂದೆ ಗೇರು ಮರಗಳಿಗೆ ಬಾಧಿಸಿದ್ದ ರೋಗದ ನಿರ್ಮೂಲನೆಗೆ ಹೆಲಿಕಾಪ್ಟರ್ ಮೂಲಕ ಉಡುಪಿ, ಮಂಗಳೂರು, ಉತ್ತರಕನ್ನಡ ಭಾಗದ ಗೇರು ಮರಗಳಿರುವ ಪ್ರದೇಶದಲ್ಲಿ ಎಂಡೋಸಲ್ಫಾನ್ ಔಷಧ ಸಿಂಪಡಿಸಲಾಗಿತ್ತು. ಆದರೆ, ಇದು ಗೇರು ಗಿಡದ ರೋಗ ವಾಸಿಗಿಂತ ಇದರ ವಿಷ ವರ್ತುಲ ಮನುಷ್ಯರ ಮೇಲೆ ಗಂಭೀರ ಪರಿಣಾಮ ಬೀರಿತ್ತು. ವಿಷದಿಂದಾಗಿ ಹುಟುವ ಮಕ್ಕಳಲ್ಲಿ ಅಂಗವೈಕಲ್ಯತೆ, ಬುದ್ದಿ ಮಾಂದ್ಯತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿತು.
ಶೇ. 4 ರಷ್ಟು ಮಂದಿಗೆ ಸೌಲಭ್ಯ:ಉತ್ತರ ಕನ್ನಡ ಜಿಲ್ಲಾದ್ಯಂತ ಈವರೆಗೆ ಸುಮಾರು 2 ಸಾವಿರ ಮಂದಿ ಎಂಡೋಸಲ್ಫಾನ್ ಪೀಡಿತರಾಗಿದ್ದಾರೆ. ಆದರೆ 2013-14 ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ ಕೇವಲ ಶೇ. 4 ರಷ್ಟು ಪೀಡಿತರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗಿದೆ. ಅಸಲಿಯಾಗಿ ಜಿಲ್ಲೆಯಲ್ಲಿ ಇನ್ನೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾದ ಎಂಡೋಸಲ್ಫಾನ್ ಪೀಡಿತರಿದ್ದು, ಅವರು ಶಿಬಿರದಿಂದ ಹೊರಗುಳಿದಿದ್ದಾರೆ. ಅಲ್ಲದೇ ವಿಷಯ ತಿಳಿಯದೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಜಿಲ್ಲಾಮಟ್ಟದ ಸಮಗ್ರ ವಿಕಲಚೇತನರ ವಿಆರ್ಡಬ್ಲ್ಯೂ, ಯುಆರ್ಡಬ್ಲ್ಯೂ ಹಾಗೂ ಎಂಆರ್ಡಬ್ಲ್ಯೂ ನೌಕರರ ಒಕ್ಕೂಟ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.